ಒಸಾಮಾ ಬಿನ್ ಲಾಡೆನ್ ಹತ್ಯೆಯಾದ ನಂತರ ಐಎಸ್ಐ ವರಿಷ್ಠ ತನ್ನ ಸ್ಥಾನ ತ್ಯಜಿಸಬೇಕೆಂಬ ವರದಿಗಳು ಬರುತ್ತಿರುವ ನಡುವೆಯೇ, ಪಾಕಿಸ್ತಾನದ ಐಎಸ್ಐ ವರಿಷ್ಠ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶುಜಾ ಪಾಷಾ ನಿಗೂಢ ಸ್ಥಳಕ್ಕೆ ತೆರಳಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಅಲ್ ಖಾಯಿದಾ ವರಿಷ್ಠ ಅಮೆರಿಕದ ವಿಶೇಷ ಸೇನಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಯಾಗುವ ಮುನ್ನ ಲಾಡೆನ್ ಜತೆ ಐಎಸ್ಐನ ಯಾವೆಲ್ಲ ಉನ್ನತ ಮಟ್ಟದ ಅಧಿಕಾರಿಗಳು ಸಂಪರ್ಕ ಹೊಂದಿದ್ದಾರೆ ಎಂಬ ಬಗ್ಗೆ ಅಮೆರಿಕ ಡಿಮ್ಯಾಂಡ್ ಮಾಡುತ್ತಿರುವ ನಡುವೆ ಪಾಷಾ ನಿಗೂಢವಾಗಿ ನಾಪತ್ತೆಯಾಗಿರುವ ಬೆಳವಣಿಗೆ ನಡೆದಿದೆ.
ಪಾಶಾ ಅವರು ಶುಕ್ರವಾರ ಪಾಕಿಸ್ತಾನದಿಂದ ತೆರಳಿದ್ದರು. ಡಾನ್ ಪತ್ರಿಕೆ ವರದಿ ಪ್ರಕಾರ, ಲಾಡೆನ್ ವಿರುದ್ಧದ ಕಾರ್ಯಾಚರಣೆ ನಂತರ ಪಾಶಾ ಅವರು ವಾಷಿಂಗ್ಟನ್‌ಗೆ ತೆರಳಿದ್ದರು. ಆದರೆ ಕೆಲವು ಮಾಧ್ಯಮಗಳ ಪ್ರಕಾರ ಐಎಸ್ಐ ವರಿಷ್ಠ ಪಾಶಾ ನಿಗೂಢ ಸ್ಥಳಕ್ಕೆ ತೆರಳಿರುವುದಾಗಿ ಹೇಳಿವೆ.
ಅಷ್ಟೇ ಅಲ್ಲ ಪಾಶಾ ಅವರು ಮಿತ್ರರಾಷ್ಟ್ರವಾದ ಚೀನಾ ಅಥವಾ ಸೌದಿ ಅರೇಬಿಯಾಕ್ಕೆ ಹೋಗಿರುವುದಾಗಿ ಇನ್ನೂ ಕೆಲವು ಮಾಧ್ಯಮದ ವರದಿಗಳು ತಿಳಿಸಿವೆ. ಆದರೆ ಅದ್ಯಾವುದೂ ಖಚಿತವಾಗಿಲ್ಲ. ಒಟ್ಟಾರೆ ಲಾಡೆನ್ ಹತ್ಯೆಯ ನಂತರ ಸಾಕಷ್ಟು ಬೆಳವಣಿಗೆ ನಡೆಯುತ್ತಿರುವ ಸಂದರ್ಭದಲ್ಲಿ ಐಎಸ್ಐ ಮುಖ್ಯಸ್ಥ ಪಾಶಾ ಅವರನ್ನು ಪಾಕಿಸ್ತಾನವೇ ಅಡಗಿಸಿಟ್ಟು ಈ ನಾಟಕವಾಡುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.