ದೇಶದ ಸಾರ್ವಭೌಮತೆಗೆ ಧಕ್ಕೆಯಾದ್ರೆ ಸಹಿಸೋಲ್ಲ ಎಂದು ಎಚ್ಚರಿಕೆ ನೀಡಿರುವ ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ, ಪಾಕಿಸ್ತಾನದ ಎಲ್ಲಾ ಕ್ರಮಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ಅಷ್ಟೇ ಅಲ್ಲ ನಾವು ಯಾವತ್ತೂ ಲಾಡೆನ್ ಪಾಕಿಸ್ತಾನಕ್ಕಾಗಲಿ ಅಥವಾ ಅಫ್ಘಾನಿಸ್ತಾನಕ್ಕಾಗಲಿ ಆಹ್ವಾನಿಸಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸೋಮವಾರ ಸಂಸತ್‌ನಲ್ಲಿ ಮಾತನಾಡಿದ ಅವರು, ಅಲ್ ಖಾಯಿದಾ ಪಾಕಿಸ್ತಾನದಲ್ಲಿ ಹುಟ್ಟಿಲ್ಲ. ನಾವು ಅಲ್ ಖಾಯಿದಾಕ್ಕೆ ಪ್ರೋತ್ಸಾಹವನ್ನೂ ಕೊಟ್ಟಿಲ್ಲ. ಪಾಕಿಸ್ತಾನ ಕೂಡ ಅನೇಕ ಅಲ್ ಖಾಯಿದಾ ಉಗ್ರರನ್ನು ಬಂಧಿಸಿದೆ. ನಮ್ಮ ಸೇನೆ, ಐಎಸ್ಐ ಎಲ್ಲವನ್ನೂ ಎದುರಿಸಲು ಸಿದ್ದವಾಗಿದೆ. ಆದರೆ ಐಎಸ್ಐ ಮೇಲಿನ ಆರೋಪ ಅಸಂಬದ್ಧವಾದದ್ದು ಎಂದು ಅಮೆರಿಕದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಇಸ್ಲಾಮಾಬಾದ್‌ನ ಅಬೋಟಾಬಾದ್‌ನಲ್ಲಿ ಅಮೆರಿಕ ವಿಶೇಷ ಸೇನಾಪಡೆ ದಿಢೀರ್ ಕಾರ್ಯಾಚರಣೆ ನಡೆಸಿ ಅಲ್ ಖಾಯಿದಾ ವರಿಷ್ಠ ಲಾಡೆನ್‌ನನ್ನ ಹತ್ಯೆಗೈದ ನಂತರ ಮೊದಲ ಬಾರಿಗೆ ಪಾಕಿಸ್ತಾನ ಬಹಿರಂಗ ಹೇಳಿಕೆ ನೀಡಿದ್ದು, ಗಿಲಾನಿ ಸಂಸತ್‌ನಲ್ಲಿ ವಿವರವಾದ ಭಾಷಣ ಮಾಡಿದರು.
ಅಮೆರಿಕದ ಕಾರ್ಯಾಚರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗಿಲಾನಿ, ನಮಗೆ ಅಮೆರಿಕದ ಬಗ್ಗೆ ಭಿನ್ನಾಭಿಪ್ರಾಯವಿದೆ. ಆದರೆ ನೆರೆಯ ಭಾರತದ ಜತೆ ಸೌಹಾರ್ದತೆಯ ಸಂಬಂಧವನ್ನು ಮುಂದುವರಿಸುವುದಾಗಿ ಹೇಳಿದರು. ಪಾಕಿಸ್ತಾನ ಉಗ್ರರ ವಿರುದ್ಧದ ಹೋರಾಟಕ್ಕೆ ಬದ್ಧವಾಗಿದೆ. ಭಯೋತ್ಪಾದನೆಯ ಪಿಡುಗಿನಿಂದ ಪಾಕ್ ಸಾಕಷ್ಟು ಸವಾಲನ್ನು ಎದುರಿಸಿದೆ. ನಾವು ಉಗ್ರವಾದಕ್ಕೆ ಯಾವಾಗಲೂ ಬೆಂಬಲ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದೇಶ ಸಾಕಷ್ಟು ಜನರನ್ನು ಕಳೆದುಕೊಂಡಿದೆ. ಪಾಕಿಸ್ತಾನಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ಹಾಗಂತ ಐಎಸ್ಐ ಮೇಲಾಗಲಿ, ಪಾಕ್ ಮೇಲಾಗಲಿ ಗೂಬೆ ಕೂರಿಸುವ ಯತ್ನ ಬೇಡ. ಕೇವಲ ನಮ್ಮ ವಿರುದ್ಧವಷ್ಟೇ ದೂಷಣೆ ಬೇಡ. ಅಲ್ ಖಾಯಿದಾ ಹಾಗೂ ಲಾಡೆನ್ ಬೆಳೆಯಲು ಅಮೆರಿಕದ ಪಾತ್ರವೂ ಸಾಕಷ್ಟಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಐಎಸ್ಐ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮಿಲಿಟರಿ ಮತ್ತು ಐಎಸ್ಐ ದೇಶದ ಸಂಪತ್ತು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅವುಗಳ ಪಾತ್ರ ಮಹತ್ತರವಾದದ್ದು ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಅಲ್ ಖಾಯಿದಾಕ್ಕೆ ಪಾಕಿಸ್ತಾನದ ಐಎಸ್ಐ ಅಥವಾ ಮಿಲಿಟರಿ ಕೃಪಾಕಟಾಕ್ಷ ಇತ್ತು ಎಂಬುದನ್ನು ಗಿಲಾನಿ ಬಲವಾಗಿ ತಳ್ಳಿಹಾಕಿದರು.