ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ವಿಶೇಷ ಸೇನಾಪಡೆ ಹತ್ಯೆಗೈದ ಬೆನ್ನಲ್ಲೇ, ಅಫ್ಘಾನ್ ತಾಲಿಬಾನ್ ಮುಖಂಡ ಮುಲ್ಲಾ ಮೊಹಮ್ಮದ್ ಓಮರ್‌ನನ್ನು ಪಾಕಿಸ್ತಾನದಲ್ಲಿ ಹತ್ಯೆಗೈಯಲಾಗಿದೆ ಎಂದು ಸೋಮವಾರ ಖಾಸಗಿ ಟಿವಿ ಚಾನೆಲ್‌ವೊಂದರ ವರದಿ ತಿಳಿಸಿದೆ.
ಖ್ವೆಟ್ಟಾದಿಂದ ಉತ್ತರ ವಜಿರಿಸ್ತಾನದತ್ತ ಮುಲ್ಲಾ ಓಮರ್ ತೆರಳುತ್ತಿದ್ದ ವೇಳೆ ಈ ಹತ್ಯೆ ನಡೆದಿದೆ ಎಂದು ಅಫ್ಘಾನಿಸ್ತಾನದ ಟೋಲೋ ಟೆಲಿವಿಷನ್ ವರದಿ ಮಾಡಿದೆ. ಆದರೆ ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ, ಓಮರ್‌ನನ್ನು ಹತ್ಯೆಗೈದವರು ಯಾರು ಮತ್ತು ಹೇಗೆ ಕೊಲ್ಲಲಾಯಿತು ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಏತನ್ಮಧ್ಯೆ ಮುಲ್ಲಾ ಓಮರ್ ಹತ್ಯೆಯನ್ನು ಭದ್ರತಾ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಅಧಿಕಾರಿಗಳು ಕೂಡ ಈ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. ಅದೇ ರೀತಿ ಮುಲ್ಲಾ ಓಮರ್ ಹತ್ಯೆಯ ವರದಿಯನ್ನು ತೆಹ್ರೀಕ್ ಇ ತಾಲಿಬಾನ್ ಸಾರಸಗಟಾಗಿ ತಳ್ಳಿಹಾಕಿದೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಲ್ಲಾ ಓಮರ್‌ನನ್ನು ತಾಲಿಬಾನ್ ಚಳವಳಿಯ ಧಾರ್ಮಿಕ ಮುಖಂಡ ಎಂದೇ ಪರಿಗಣಿಸಲಾಗಿದೆ.