ಮೃತ ತಾಲಿಬಾನಿಗಳ ಕೈಬೆರಳು ಕತ್ತರಿಸಿಟ್ಟುಕೊಂಡ ಬ್ರಿಟನ್ ಯೋಧ!
ಲಂಡನ್, ಮಂಗಳವಾರ, 9 ಆಗಸ್ಟ್ 2011( 11:39 IST )
ಅಫ್ಘಾನಿಸ್ತಾನದಲ್ಲಿದ್ದ ಬ್ರಿಟಿಷ್ ಯೋಧನೊಬ್ಬ ಮೃತ ತಾಲಿಬಾನ್ ಹೋರಾಟಗಾರರ ಕೈಬೆರಳುಗಳನ್ನು ನೆನಪಿನ ಗುರುತಾಗಿ ಇಟ್ಟುಕೊಂಡಿದ್ದ ಪ್ರಕರಣದ ಕುರಿತು ಬ್ರಿಟನ್ ರಕ್ಷಣಾ ಸಚಿವಾಲಯ ತನಿಖೆ ನಡೆಸುತ್ತಿದೆ.
ಬ್ರಿಟನ್ ಪಡೆಯ ಅರ್ಗಿಯಲ್ ಮತ್ತು ಸೂಥರ್ ಲ್ಯಾಂಡ್ ಹೈಲ್ಯಾಂಡರ್ಸ್‌ನ ಯೋಧನೊಬ್ಬ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದಾನೆ.
ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ 2010ರಲ್ಲಿ ನಿಯೋಜನೆಗೊಂಡು ಈ ವರ್ಷದ ಏಪ್ರಿಲ್‌ವರೆಗೂ ಅಫ್ಘಾನ್ ಯೋಧರಿಗೆ ತರಬೇತಿ ನೀಡಿದ್ದ ಬ್ರಿಟನ್‌ನ ಸೆಂಟ್ರಲ್ ಬೆಟಾಲಿಯನ್ ಯೋಧನೊಬ್ಬನ ಕೃತ್ಯದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಬ್ರಿಟನ್ ಯೋಧನ ಕೃತ್ಯವು ಆಘಾತಕಾರಿ ಸಂಗತಿಯಾಗಿದೆ ಎಂದು ಬ್ರಿಟನ್ ಸೇನಾಪಡೆ ಒಕ್ಕೂಟದ ಕಾರ್ಯಕಾರಿ ಅಧ್ಯಕ್ಷ ಡಗ್ಲಾಸ್ ಯಂಗ್ ತಿಳಿಸಿದ್ದಾರೆ.
ಈ ಎಲ್ಲ ಆಪಾದನೆಗಳ ವಾಸ್ತವಾಂಶದ ಬಗ್ಗೆ ಇನ್ನಷ್ಟು ದೃಢವಾಗುವ ಅಗತ್ಯವಿದ್ದು, ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ. ಯೋಧನ ಈ ರೀತಿಯ ವರ್ತನೆ ಸೇನಾ ನಡವಳಿಕೆಗೆ ವಿರುದ್ಧವಾಗಿವೆ ಎಂದು ಡಗ್ಲಾಸ್ ಯಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.