ಮಹತ್ತರ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಸರಕಾರ ರಚಿಸುವಲ್ಲಿ ಕಾಂಗ್ರೆಸ್ ಪಕ್ಷವು ಮಾಯಾವತಿ ನೇತೃತ್ವದ ಬಿಎಸ್‌ಪಿಗೆ ಬೆಂಬಲ ಸೂಚಿಸುವ ಎಲ್ಲ ಲಕ್ಷಣಗಳು ಕಾಣತೊಡಗಿವೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಹೊಸ ಸುದ್ದಿಯಾಗಿದೆ.
ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯ ಮತ ಎಣಿಕೆಯು ಒಂದು ದಿನ ಬಾಕಿ ಇರುವಂತೆ ಕಾಂಗ್ರೆಸ್ ಪಕ್ಷದ ಈ ನಿಲುವು ಅಲ್ಲಿಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ.
ಸಮಾಜವಾದಿ ಹಾಗೂ ಬಿಜೆಪಿ ಪಕ್ಷಕಗಳನ್ನು ಟೀಕಿಸಿರುವ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರು, ಮಾಯಾವತಿ ನೇತೃತ್ವದ ಬಿಎಸ್‌ಪಿಯೊಂದಿಗೆ ಯಾವುದೇ ಮಾತುಕತೆ ನಡೆಸಿರುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಪ್ರಜಾಪ್ರಭುತ್ವ ಹಾಗೂ ಜನರ ಏಳಿಗೆ ಬಯಸುವ, ಜಾತ್ಯತೀತ ತತ್ವಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವಂತಹ ಸರಕಾರದ ರಚನೆಗೆ ತಮ್ಮ ಪಕ್ಷ ಪ್ರಯತ್ನಿಸುವುದಾಗಿ ಅವರು ಸುದ್ದಿಗಾರರಿಗೆ ಬಿಜೆಪಿ ಹಾಗೂ ಎಸ್‌ಪಿ ಪಕ್ಷಗಳನ್ನು ಟೀಕಿಸುತ್ತಾ ಹೇಳಿದರು.
ಉತ್ತರ ಪ್ರದೇಶದ ಮುಂದಿನ ಸರಕಾರ ರಚನೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಮುಖ ಪಾತ್ರವಹಿಸಲಿದ್ದು, ಸರಕಾರ ರಚನೆಯಲ್ಲಿ ಎಸ್‌ಪಿಯೊಂದಿಗೆ ಕೈಜೋಡಿಸಲು ಸಾಧ್ಯವೆ ಇಲ್ಲ ಎಂದು ಜೈಸ್ವಾಲ್ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಆದರೆ, ಕಾಂಗ್ರೆಸ್ ಪಕ್ಷವು ಮುಂದಿನ ರಾಜಕೀಯ ಮೈತ್ರಿಯ ಬಗ್ಗೆ ಇದುವರೆಗೂ ಯಾವ ಪಕ್ಷದೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಜೈಸ್ವಾಲ್ ವಿವರಿಸಿದರು.
|