ಜಮ್ಮು ಮತ್ತು ಕಾಶ್ಮೀರ ಶಾಂತಿ ಪ್ರಕ್ರಿಯೆ ಸರಿಯಾದ ದಿಕ್ಕಿನಲ್ಲಿ ಸಾಗಿತ್ತು ಎಂದು ಪೀಪಲ್ಸ್ ಡೆಮೊಕ್ರಟಿಕ್ ಪೋರಂ(ಪಿಡಿಎಫ್)ನ ಅಧ್ಯಕ್ಷ ಹಕೀಂ ಮೊಹಮ್ಮದ್ ಯಾಸಿನ್ ಹೇಳಿದ್ದಾರೆ.
ಶಾಂತಿಪ್ರಕ್ರಿಯೆಯಲ್ಲಿ ರಾಜಕೀಯ ಒಡಕನ್ನುಂಟುಮಾಡುವ ತಂತ್ರಗಳಿಂದ ಏನೂ ಸಾಧಿಸಲಾಗದು. ಆದರೆ ಇದರಿಂದ ಸಾರ್ವಜನಿಕ ಹಿತಾಸಕ್ತಿಯನ್ನು ಹಾಳು ಮಾಡಿದಂತಾಗುತ್ತದೆ ಎಂದು ಅವರು ಭಾನುವಾರ ಬಡಗಾಂ ಜಿಲ್ಲೆಯ ಶೊಗ್ಪೂರಾ ಹಳ್ಳಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಹೇಳಿದರು.
ಜಮ್ಮು ಕಾಶ್ಮೀರದ ಸಾರಿಗೆ ಸಚಿವರೂ ಆಗಿರುವ ಯಾಸಿನ್, ಮೂರು ದುಂಡು ಮೇಜಿನ ಸಮ್ಮೇಳನಗಳೂ ಪ್ರೋತ್ಸಾಹದಾಯಕವಾಗಿದ್ದವು ಎಂದರು.
ರಾಜ್ಯ ಸಹಕಾರದಿಂದ ಕೇಂದ್ರ ಸರಕಾರವು ಶಾಂತಿ ಪ್ರಕ್ರಿಯೆಗೆ ಚಾಲನೆ ನೀಡಿತು. ಇದರಿಂದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವತ್ತ ಸರಿಯಾದ ದಿಕ್ಕಿನಲ್ಲಿ ಸಾಗಬಹುದಾಗಿದೆ. ಪ್ರತ್ಯೇಕತಾವಾದಿಗಳೂ ಸಹ ಮಾತುಕತೆಯ ಭಾಗವಾದರೆ ನಿರ್ದಿಷ್ಟವಾದ ಪರಿಣಾಮವನ್ನು ಕಾಣಲು ಸಾಧ್ಯವಾಗಬಹುದು ಎಂದು ಅವರು ವಿವರಿಸಿದರು.
|