ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಲೇ.27 ಒಬಿಸಿ ಕೋಟ ಜಾರಿ ಮಾಡುವುದಕ್ಕೆ ಅವಕಾಶ ನೀಡುವ ವಿವಾದಿತ ಕೋಟ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಬಂದಿರುವ ಅಹವಾಲುಗಳನ್ನು ಸರ್ವೋಚ್ಛ ನ್ಯಾಯಾಲಯವು ಇಂದು ವಿಚಾರಣೆ ಮಾಡಲಿದೆ.
ಅರಿಜಿತ್ ಪ್ರಸಾಯತ್ ಮತ್ತು ಎಲ್ ಎಸ್ ಪಂತ ಅವರನ್ನೊಳಗೊಂಡ ಪೀಠದ ಮುಂದೆ ಈ ವಿಚಾರವು ಬರಲಿದ್ದು, ಮಾರ್ಚ್ 29ರ ಮಧ್ಯಂತರ ಆದೇಶದಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಈ ಪದ್ಧತಿಯನ್ನು ಜಾರಿಗೊಳಿಸುವುದಕ್ಕೆ ತಡೆ ನೀಡಿತ್ತಲ್ಲದೆ, ಆನಂತರ ಈ ಆದೇಶದಲ್ಲಿ ಮಾರ್ಪಾಟನ್ನು ಕೋರಿ ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
ಆದಾಗ್ಯೂ, ಕೋಟ ಜಾರಿಗೆ ಒಪ್ಪಿಗೆ ಪಡೆಯಲು ಎರಡು ಸಲ ವಿಫಲವಾದ ನಂತರ, ಕೇಂದ್ರವು ಈ ವಿಚಾರವನ್ನು ಭಾರತದ ಮುಖ್ಯ ನ್ಯಾಯಾಧೀಶ ಕೆ ಜಿ ಬಾಲಕೃಷ್ಣನ್‌ರವರ ಮುಂದೆ ತೆಗೆದುಕೊಂಡು ಹೋಗುವ ಅಸಾಮಾನ್ಯ ಕ್ರಮ ಕೈಗೊಂಡಾಗ, ಅವರು ಆಗಸ್ಟ್‌ನ ಮೂರನೇ ವಾರಕ್ಕೆ ಮುಂದೂಡಲಾಗಿದ್ದ ವಿಚಾರಣೆಯನ್ನು ಮೇ 8ಕ್ಕೆ ನಿಗದಿಪಡಿಸಿದಾಗ ಕೇಂದ್ರ ಸ್ವಲ್ಪ ನಿರಾಳವಾಯಿತು.
ಕೋಟ ವಿರೋಧಿ ಅಹವಾಲುದಾರರ ತೀವ್ರ ಪ್ರತಿಭಟನೆಯ ನಡುವೆಯೂ ಮುಖ್ಯ ನ್ಯಾಯಾಧೀಶರು ಕೇಂದ್ರದ ಮನವಿಯನ್ನು ಪುರಸ್ಕರಿಸಿದರು.
ಇದೇ ಸಂದರ್ಭದಲ್ಲಿ, ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್‌ರ ಆರ್‌ಜೆಡಿ, ಯುಪಿಎ ಮತ್ತೊಂದು ಮೈತ್ರಿ ಪಕ್ಷ ಪಿಎಂಕೆ ಶೇ.27 ಕೋಟಗೆ ಬೆಂಬಲ ಸೂಚಿಸಿ, ಅದರ ಪರವಾಗಿ ಅರ್ಜಿ ಸಲ್ಲಿಸಿದರು.
|