ಮುಂದಿನ ತಿಂಗಳು ಪ್ರಧಾನಿ ಮನಮೋಹನ್ ಅವರ ರಾಜ್ಯಸಭೆಯ ಅವಧಿ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಸ್ಸಾಂ ಕ್ಷೇತ್ರದಿಂದ ದ್ವೈವಾರ್ಷಿಕ ಮರು ಚುನಾವಣೆಯಲ್ಲಿ ಸ್ಪರ್ಧಿಸಲು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಮೇ 24 ರಂದು ಈ ಚುನಾವಣೆ ನಡೆಯಲಿದ್ದು, ಇದುವರೆಗೆ ಪ್ರಧಾನಿ ಸಿಂಗ್ ಈಶಾನ್ಯ ರಾಜ್ಯಗಳಿಂದಲೇ ಪ್ರತಿನಿಧಿಸುತ್ತಾ ಬಂದಿದ್ದಾರೆ. ಸದ್ಯ ಅವರು ಎರಡು ದಿನಗಳ ಭೇಟಿಗಾಗಿ ಅಲ್ಲಿಗೆ ತೆರಳಿದ್ದಾರೆ.
2001 ರಲ್ಲಿ ಮೂರನೇ ಬಾರಿ ಆಯ್ಕೆಯಾಗಿದ್ದಾಗ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸಿಂಗ್ ಕಾರ್ಯನಿರ್ವಹಿಸಿದ್ದರು. ಈಗ ಅವರ ಅವಧಿಯು, ಜೂನ್ 14 ರಂದು ಅಂತ್ಯಗೊಳ್ಳಲಿದೆ.
ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರು ಪ್ರಧಾನಿಯಾಗಲು ನಿರಾಕರಿಸಿದ ನಂತರ, ಮನಮೋಹನ್ ಸಿಂಗ್ ಆ ಹುದ್ದೆ ಅಲಂಕರಿಸಿದ್ದರು.
ಸೋಮವಾರ ಚುನಾವಣೆಯ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಸಲು ಮೇ 14 ಕೊನೆಯ ದಿನವಾಗಿದೆ ಹಾಗೂ ಅದರ ಮರುದಿನವೆ ನಾಮಪತ್ರ ಪರಿಶೀಲನೆ ಮಾಡಲಾಗುವುದು.
|