ಗುಜರಾತ್‌ನ ಆನಂದ್ ಜಿಲ್ಲೆಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಸುಮಾರು 20 ಮಂದಿ ಪ್ರಯಾಣಿಕರು ದಾರುಣವಾಗಿ ಸಾವನಪ್ಪಿದ್ದಾರೆ. ಸಾವುನೋವಿನ ಸಂಖ್ಯೆ ಇನ್ನೂ ಹೆಚ್ಚಬಹುದಾದ ಆತಂಕವಿದೆ. ರಾಜ್ಯ ಸರ್ಕಾರಿ ಸಿಎನ್‌ಜಿ ಬಸ್ಸೊಂದು ರಾಸಾಯನಿಕ ಟ್ಯಾಂಕರ್‌ಗೆ ಡಿಕ್ಕಿಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಏನು ಸಂಭವಿಸಿದೆ ಎಂದು ಅರಿವಾಗುವ ಮೊದಲೇ ಬಸ್‌ಗೆ ಬೆಂಕಿ ಹತ್ತಿಕೊಂಡು ಹಲವು ಮಂದಿ ಪ್ರಯಾಣಿಕರು ಸುಟ್ಟುಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಬಸ್ ವಡೋದರಾ ಕಡೆ ಆನಂದ್-ಮೊಗರ್ ರಸ್ಥೆಯಲ್ಲಿ ಹೋಗುತ್ತಿರುವಾಗ ಈ ದುರ್ಘಟನೆ ನಡೆಯಿತು. ಈ ದುರ್ಘಟನೆ ಮುಖ್ಯವಾಗಿ ಬಸ್ ಮತ್ತು ಟ್ಯಾಂಕರ್ ಮದ್ಯೆಯಾಗಿದ್ದರೂ, ಇತರ ಕೆಲವು ವಾಹನಗಳು ಇದರಲ್ಲಿ ಸೇರಿದ್ದವು. ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ತಣ್ಣೀರೆರಚಿ ಬೆಂಕಿಯ ಜ್ವಾಲೆಯನ್ನು ಕಡಿಮೆ ಗೊಳಿಸಿ ಸಾದ್ಯವಾದಷ್ಟು ಪ್ರಯಾಣಿಕರನ್ನು ರಕ್ಷಿಸಲು ಪ್ರಯತ್ನಿಸಿದರು.
ಈ ರಸ್ಥೆಯಲ್ಲಿ ಸಾಗುತ್ತಿದ್ದ ಪಾದಚಾರಿಗಳೂ ಕೂಡ ಈ ಜ್ವಾಲೆಗೆ ಸಿಲುಕಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಆದರೆ ಇದು ಅಧಿಕೃತವಾಗಿ ದೃಡಪಟ್ಟಿಲ್ಲ. ಈ ದುರ್ಘಟನೆಯಲ್ಲಿ ಬದುಕುಳಿದ ಪ್ರಯಾಣಿಕರು ಸುಟ್ಟ ಗಾಯಕ್ಕೊಳಗಾಗಿದ್ದು ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
|