ತಮಿಳುನಾಡಿನ ತಿರುಪ್ಪೂರ್‌ಗೆ ಸಮೀಪವಿರುವ ಅನಗೇರಿಪಾಳಯ ಎಂಬಲ್ಲಿ ಸಂಭವಿಸಿದ ದುರಂತದಲ್ಲಿ 30 ಮಂದಿಸಾವನ್ನಪ್ಪಿದ್ದಾರೆ.
ಇಲ್ಲಿನ ಬಾರ್‍ವೊಂದರಲ್ಲಿ ಮದ್ಯವನ್ನು ಖರೀದಿಸುತ್ತಿದ್ದವರ ಮೇಲೆ ಬುಧವಾರ ರಾತ್ರಿ ಗೋಡೆ ಕುಸಿದು ಬಿದ್ದ ಪರಿಣಾಮ ಸ್ಧಳದಲ್ಲೇ 30 ಮಂದಿ ಸಾವನ್ನಪ್ಪಿದ್ದು,ಐದು ಜನರು ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗೋಡೆಯ ಅಡಿ ಭಾಗದಲ್ಲಿ ಸಿಲುಕಿ ಬಿದ್ದಿರುವ ಮೃತ ದೇಹಗಳನ್ನು ಹೊರ ತೆಗೆಯುವಲ್ಲಿ ಅಗ್ನಿಶಾಮಕ ದಳ,ರಕ್ಷಣಾ ಪಡೆ,ಪೊಲೀಸರು ಹಾಗೂ ಸಾರ್ವಜನಿಕರು ಸಹಕರಿಸುತ್ತಿದ್ದು,ಸುಮಾರು 27ಮಂದಿ ದೇಹಗಳನ್ನು ತೆಗೆಯಲಾಗಿದ್ದು,ಅವರನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಐದು ಜನರನ್ನು ತಿರುಪುರ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಬಾರ್ ಸಮೀಪದ ಸುಮಾರು 22 ಅಡಿ ಎತ್ತರದ ಗೋಡೆ ಕುಸಿದು ಬಿದ್ದ ಪರಿಣಾಮ ಮದ್ಯ ಸೇವಿಸುತ್ತಿದ್ದ ಹಾಗೂ ಖರೀದಿಸುತ್ತಿದ್ದ ಜನರು ಬಲಿಯಾಗಿದ್ದರು.
ಮಳೆಯಿಂದ ರಕ್ಷಿಸಲು ಈ ಗೋಡೆಯನ್ನು ಕಟ್ಟಲಾಗಿತ್ತು.ಕುಸಿದು ಬಿದ್ದ ಗೋಡೆಯನ್ನು ಗಂಟೆಗಳ ಕಾಲ ಕಾರ್ಯನಿರ್ವಹಿಸಿ ಕಲ್ಲುಗಳನ್ನು ಒಂದೆಡೆ ಸೇರಿಸಿ ಇಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
|