ಭಾರತೀಯ ಕರಾವಳಿ ಪ್ರದೇಶದಲ್ಲಿ ಸಮುದ್ರಯಾನ ಪ್ರವಾಸಿ ಕೇಂದ್ರವನ್ನು ಆರಂಭಿಸುವ ನಿಟ್ಟಿನಲ್ಲಿ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಐದು ಪ್ರಮುಖ ಬಂದರುಗಳನ್ನು ಅಭಿವೃದ್ಧಿ ಪಡಿಸಲಿದೆ.
ಅವುಗಳಲ್ಲಿ ಮುಖ್ಯವಾಗಿ ಮುಂಬೈ,ಮರ್ಮು ಗೋವಾ,ನವ ಮಂಗಳೂರು,ಕೊಚ್ಚಿ ಹಾಗೂ ಪಶ್ಚಿಮ ಕರಾವಳಿಯ ತೂತುಕುಡಿ ಬಂದರುಗಳನ್ನು ಗುರುತಿಸಿದೆ.
ಈ ಕರಾವಳಿ ಪ್ರದೇಶದಲ್ಲಿ ಸಮುದ್ರ ಪರ್ಯಟನೆ ಮಾಡಲು ಅನುಕೂಲಕೂಲವಾಗುವಂತೆ ಪ್ರವಾಸಿ ಕೇಂದ್ರಗಳನ್ನು ಆರಂಭಿಸಲು ಕೇಂದ್ರ ಸಂಕಲ್ಪ ಮಾಡಿರುವುದಾಗಿ ಪ್ರವಾಸೋದ್ಯಮ ಕಚೇರಿಯ ಮೂಲಗಳು ತಿಳಿಸಿವೆ.
ಪ್ರವಾಸೋದ್ಯಮ ಸಚಿವಾಲಯ ಹಾಗೂ ಬಂದರು ಮತ್ತು ಹಡಗು ಮಂಡಳಿ ಜಂಟಿಯಾಗಿ ಯೋಜನೆಯನ್ನು ರೂಪಿಸಿದ್ದು,ಈ ಬಂದರು ಪ್ರದೇಶಗಳನ್ನು ಪ್ರಪಂಚದ ಪ್ರಮುಖ ಸಮುದ್ರಯಾನ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಸಂಕಲ್ಪ ಹೊಂದಿರುವುದಾಗಿ ಹೇಳಿದೆ.
ಈ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಳೆದ ವರ್ಷವೇ ಸಮಿತಿಯನ್ನು ರಚಿಸಲಾಗಿತ್ತು.ಆದರೆ ಸಮಿತಿ ಮತ್ತೊಂದು ಬಂದರಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರಿಂದ ಕಾರ್ಯಭಾರ ನಿಧಾನವಾಗಿದೆ.
ರಾಷ್ಟ್ರದ ವಿವಿಧ ಪ್ರಮುಖ ರಾಜ್ಯಗಳ ಕರಾವಳಿ ಪ್ರದೇಶಗಳ ಅಭಿವೃದ್ಧಿ ಪಡಿಸುವ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಆರ್ಥಿಕ ಸಚಿವಾಲಯಕ್ಕೆ ಪ್ರವಾಸೋದ್ಯಮ ಈಗಾಗಲೇ ಮನವಿ ಸಲ್ಲಿಸಿದೆ ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.
|