ರಾಜಸ್ತಾನದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ.
ಜೈಪುರದಿಂದ ಆಗ್ರಾದತ್ತ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಸುಮಾರು 20 ಸಾವಿರ ಮಂದಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪ್ರಕರಣದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.
ರಾಜಸ್ತಾನ್‌ದಿಂದ ಸುಮಾರು 40 ಕಿ.ಮಿ.ದೂರದಲ್ಲಿ ಇರುವ ಪಾಟೋಲಿ ಗ್ರಾಮದ ದೌಸಾ ಎಂಬಲ್ಲಿ ಪೊಲೀಸರು ಏಕಾಏಕಿ ನಡೆಸಿದ ಗೋಲಿಬಾರಿಗೆ 4 ಮಂದಿ ಗ್ರಾಮಸ್ಧರು ಬಲಿಯಾಗಿದ್ದಾರೆ.
ಆದರೆ ಈ ಘಟನೆಯಿಂದ ಉದ್ರೀಕ್ತಗೊಂಡ ಗುಜ್ಜಾರ್ ಜನರು ನಡೆಸಿದ ದಾಳಿಗೆ ಇಬ್ಬರು ಪೊಲೀಸರು ಮೃತಪಟ್ಟಿದ್ದು,14 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಜೈಪುರ್ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ಗ್ವಾಲಾ ತಿಳಿಸಿದ್ದಾರೆ.
ಇಲ್ಲಿನ ಗುಜ್ಜಾರ್ ಜನಾಂಗದ ಜನರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ ಸುಮಾರು ಇಪ್ಪತ್ತು ಸಾವಿರ ಮಂದಿ ಜೈಪುರ್-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆಗಿಳಿದಾಗ ಪೊಲೀಸರು ಗೋಲಿಬಾರ್ ನಡೆಸಿದ್ದರು.
ಇದು ಮೀಸಲಾತಿಯಿಂದ ಬುಗಿಲೆದ್ದ ಪ್ರತಿಭಟನೆಯಾಗಿತ್ತು.2003ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದ ಗುಜ್ಜಾರ್ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಭರವಸೆ ನೀಡಿತ್ತು.
ಈ ಭರವಸೆಯಿಂದಾಗಿ ಗುಜ್ಜಾರ್ ಜನಾಂಗ ಬಿಜೆಪಿಯನ್ನು ಬೆಂಬಲಿಸಿದ ಪರಿಣಾಮ ಆಡಳಿತದ ಗದ್ದುಗೆಯನ್ನು ಏರಿತ್ತು.ಆದರೆ ಇದೀಗ ಮೂರು ವರ್ಷ ಕಳೆದರೂ ಗುಜ್ಜಾರ್ ಜನಾಂಗದ ಬೇಡಿಕೆ ಈಡೇರಿಸದಿದ್ದನ್ನು ವಿರೋಧಿಸಿ ಇಂದು ಪ್ರತಿಭಟನೆ ನಡೆಸಿದ್ದವು.
|