ದೇಶದಾದ್ಯಂತ ಕುತೂಹಲ ಕೆರಳಿಸಿರುವ ಗೋವಾರಾಜ್ಯ ಶಾಸನ ಸಭಾ ಚುನಾವಣೆಗಾಗಿ ಮತದಾನ ಇಂದು ಬೆಳಗಿನಿಂದಲೇ ಆರಂಭವಾಗಿದೆ. ರಾಜಕೀಯ ಪಕ್ಷಗಳು, ನಾಯಕರಲ್ಲಿ 'ಮಾಡು- ಮಡಿ' ರೀತಿಯ ಜಿದ್ದು ಇರುವುದರಿಂದ ಬಿಗು ಪೊಲೀಸ್ ಬಂದೋಬಸ್ ಏಪರ್ಪಡಿಸಲಾಗಿದೆ.
ಗೋವಾ ಶಾಸನ ಸಭೆಯ 40 ಸದಸ್ಯ ಸಂಪುಟಕ್ಕಾಗಿ ಪ್ರಸ್ತುತ ಚುನಾವಣೆ ನಡೆಯುತ್ತಿದೆ. ಹಾಲಿ ಮುಖ್ಯ ಮಂತ್ರಿ ಪ್ರತಾಪಸಿಂಹ ರಾಣೆಯವರೂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸುಮಾರು 202 ಅಭ್ಯರ್ಥಿಗಳು ತಮ್ಮ ರಾಜಕೀಯ ಭವಿಷ್ಯ ಪರೀಕ್ಷೆಗಾಗಿ ಸ್ಪರ್ಧಾ ಕಣದಲ್ಲಿದ್ದಾರೆ.
ಸ್ಪರ್ಧಾ ಕಣದ ಇನ್ನೊಂದು ವಿಶೇಷತೆ ಎಂದರೆ ಆರು ಮಂದಿ ಮಾಜಿ ಮುಖ್ಯ ಮಂತ್ರಿಗಳು ಚುನಾವಣೆ ಎದುರಿಸುತ್ತಿದ್ದಾರೆ. ಹಾಲಿ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯ ಮಂತ್ರಿ ಮನೋಹರ ಪಾರಿಕ್ಕಾರ್ ಹಾಗೂ ಸಭಾಧ್ಯಕ್ಷ ಫ್ರಾನ್ಸಸ್ಕೊ ಸಾರ್ದೀನಾ ಅವರು ಸುದ್ದಿಯಲ್ಲಿರುವ ಮತ್ತಿಬ್ಬರು ವ್ಯಕ್ತಿಗಳು.
ಚುನಾವಣಾ ಕಣದಲ್ಲಿರುವ ವಿವಿಧ ಪಕ್ಷ, ಮೈತ್ರಿಕೂಟಗಳ ವಿಜೇತರಿಗಾಗಿ ಸ್ಥಾನ ಹಂಚಿಕೆ ಹೀಗಿದೆ. ಬಿಜೆಪಿ -33, ಕಾಂಗ್ರೆಸ್‌ಎನ್‌ಸಿಪಿ ಮೈತ್ರಿ ಕೂಟ-38, ಮಹಾರಾಷ್ಟ್ರ ವಾದಿ ಗೋಮಂತಕ್ ಪಾರ್ಟಿ 26, ಸಿಪಿಎಂ4, ಗೋವಾ ಸ್ವರಾಜ್ ಪಾರ್ಟಿ 1, ಜನತಾ ದಳ 12, ಆರ್‌ಪಿಐ(ಎ)4,ಯುಜಿಡಿಪಿ11, ಶಿವಸೇನೆ 7, ಚರ್ಚಿಲ್ ಅಲ್ಮೆಡೊರ ಗೋವಾ ರಕ್ಷಕ ದಳ (ಎಸ್‌ಜಿಎಫ್)17 ಸ್ಥಾನಗಳಿಗಾಗಿ ಹೋರಾಟ ನಡೆಸುತ್ತಿವೆ.
ಮತದಾನದ ನಿಮಿತ್ತ ಯಾವುದೇ ಅಹಿತಕರ ಘಟನೆಗಳನ್ನು ನಿಯಂತ್ರಿಸಲು, ಕಾನೂನು ಸುವ್ಯವಸ್ಥೆ ಪಾಲಿಸಲು 1000 ಕ್ಕೂ ಮಿಕ್ಕಿದ ಮತಕಟ್ಟೆಗಳಲ್ಲಿ ಕೇಂದ್ರೀಯ ಅರೆಮಿಲಿಟರಿ ಪಡೆಗಳು ಹಾಗೂ ರಾಜ್ಯ ಪೊಲೀಸ್ ಪಡೆ ಬಿಗು ಪಹರೆ ನಡೆಸುತ್ತಿದೆ. ಮತದಾನ ಪ್ರಗತಿಯಲ್ಲಿದೆ.
|