ರಾಜಸ್ತಾನದಿಂದ ನೆರೆಯ ರಾಜ್ಯಗಳತ್ತ ಹರಡುತ್ತಿರುವ ಗುಜ್ಜಾರ ಸಮುದಾಯದವರ ಆಕ್ರೋಶ ತಣಿಸಲು ಹಾಗೂ ಪ್ರಮುಖ ಬೇಡಿಕೆಯಾದ ಪರಿಶಿಷ್ಟ ಪಂಗಡದಲ್ಲಿ ಸೇರಿಸುವುದನ್ನು ಚರ್ಚಿಸಲು ಮುಖ್ಯಮಂತ್ರಿ ವಸಂಧರಾ ರಾಜೆ ಇಂದು ಮಧ್ಯಾಹ್ನ ಪ್ರಸ್ತುತ ಸಮುದಾಯ ಮುಖಂಡರ ಸಭೆ ನಡೆಸುತ್ತಿದ್ದಾರೆ.
ಮಂಗಳವಾರದಿಂದೀಚೆಗೆ ಹಿಂಸಾಚಾರ ತಾಂಡವವಾಡುತ್ತಿದ್ದ ರಾಜಸ್ತಾನದಲ್ಲಿ ಜನ ಜೀವನವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೆಯವರು ಮಾತುಕತೆಗೆ ಸಿದ್ಧರಾಗಿದ್ದರು. ಪ್ರತಿಭಟನಾಕಾರರೂ ಮುಖ್ಯಮಂತ್ರಿಯವರೊಂದಿಗೆ ಮಾತುಕತೆಗಾಗಿ ಒತ್ತಾಯಿಸಿದ್ದರು.
ತನ್ಮಧ್ಯೆ ಇದುವರೆಗಿನ ಹಿಂಸಾಚಾರದಲ್ಲಿ ಒಟ್ಟು 23 ಮಂದಿ ಸಾವನ್ನಪ್ಪಿದ್ದಾರೆ. ಆದಾಗ್ಯೂ ಗಲಭೆ, ಹಿಂಸಾಚಾರ, ಪ್ರತಿಭಟನೆಗಳು ಮುಂದುವರಿದಿವೆ. ಪರಿಶಿಷ್ಟಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಹಿಂದುಳಿದ ಗುಜ್ಜಾರರು ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆಸಿದ್ದ ರಸ್ತೆ ತಡೆಯಲ್ಲಿ ಗರ್ಷಣೆ ನಡೆದು, ಪೊಲೀಸ್ ಗೋಲೀಬಾರ್ ಸಂಭವಿಸಿತ್ತು. ಇದರಲ್ಲಿ 13 ಮಂದಿ ಮೃತಪಟ್ಟಿದ್ದರು.
ಆ ಬಳಿಕ ಹಿಂಸಾಚಾರ ಭುಗಿಲೆದ್ದು ಸಾವಿನ ಸಂಖ್ಯೆ 23ಕ್ಕೇರಿತು. ಸೇನೆಯನ್ನು ನಿಯೋಜಿಸಲಾಗಿತ್ತು. ಕಳೆದ ದಿನ ಪರಿಸ್ಥಿತಿ ನಿಯಂತ್ರಿಸಲು ಸವಾಯ್ ಮಾಧೋರ್ ಪುರ್ ಮತ್ತು ಭರತ್ ಪುರ್‌ಗಳಲ್ಲಿ ಕಂಡಲ್ಲಿ ಗುಂಡು ಹಾರಿಸಲು ಆದೇಶ ನೀಡಲಾಗಿತ್ತು.
|