ರಾಜಸ್ತಾನ ರಾಜ್ಯದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿರುವ ಗುಜ್ಜಾರ ಸಮುದಾಯದವರ ಪ್ರತಿಭಟನೆ, ಘರ್ಷಣೆಗಳು ಅನಿಯಂತ್ರಿತವಾಗಿ ಮುಂದುವರಿದಿರುವಂತೆಯೇ, ಶಾಂತಿಪಾಲನೆಗಾಗಿ ಪ್ರಧಾನಮಂತ್ರಿ ಮನ್‌ಮೋಹನ್ ಸಿಂಗ್ ಜನತೆಯಲ್ಲಿ ವಿನಂತಿಸಿದ್ದಾರೆ. ಸೇನೆ ವೈಮಾನಿಕ ಸಮೀಕ್ಷೆ ನಡೆಸಿದೆ.
ಪ್ರಧಾನಿ ಮನವಿ : ರಾಜ್ಯದಲ್ಲಿ ಘರ್ಷಣೆಯಲ್ಲಿರುವ ನಿರತರಾಗಿರುವ ಜನತೆ ಶಾಂತಿ ಪಾಲಿಸ ಬೇಕು, ಸಂಯಮ ಪಾಲಿಸಬೇಕೆಂದು ಪ್ರಧಾನ ಮಂತ್ರಿ ಮನಮೋಹನ ಸಿಂಗ್ ವಿನಂತಸಿದ್ದಾರೆ. ಬೇಡಿಕೆಗಳನ್ನು ಕಾನೂನಿಗೆ ಬದ್ಧವಾಗಿ ಸರ್ಕಾರಗಳು ಪರಿಗಣಿಸಲಿವೆ ಎಂದವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ವೈಮಾನಿಕ ಸಮೀಕ್ಷೆ : ರಾಜ್ಯದಲ್ಲಿ ಗುಜ್ಜಾರರು ಹಾಗೂ ಮೀನಾ ಸಮುದಾಯದವರ ಘರ್ಷಣೆಯಿಂದ ತ್ವೇಷಾವಸ್ಥೆಯಲ್ಲಿರುವ ಪ್ರದೇಶಗಳನ್ನು ಶನಿವಾರ ಮಧ್ಯಾಹ್ನ ಸೇನೆ ವೈಮಾನಿಕ ಸಮೀಕ್ಷೆ ನಡೆಸಿದೆ. ಹಿಂಸಾಚಾರಗ್ರಸ್ತ ಪ್ರದೇಶಗಳಾದ ಭರತ್‌ಪುರ, ಧೋಲಾಪುರ, ಆಲ್ವಾರ್, ದೋಸಾ, ಕರೋಲಿ, ಸವಾಯ್ ಮಾಧೋಪುರ್, ಜೈಪುರ ಗ್ರಾಮಾಂತರ ಪ್ರದೇಶ, ಕೋಟಾ ಹಾಗೂ ತಾಂಕ್ ಜಿಲ್ಲೆಗಳನ್ನು ವೀಕ್ಷಣೆ ನಡೆಸಲಾಗಿದೆ.
ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ರೈಲುಹಳಿ, ರಸ್ತೆ ಹೆದ್ದಾರಿಗಳಿಗೆ ಪ್ರತಿಭಟನಾಕಾರರು ಅಡಚಣೆಯನ್ನುಂಟು ಮಾಡಿದ್ದಾರೆ ರಾಜ್ಯ ಗೃಹ ಕಾರ್ಯದರ್ಶಿ ವಿ ಎಸ್ ಸಿಂಗ್ ಹಾಗೂ ಪೊಲೀಸ್ ಮಹಾ ನಿರ್ದೇಶಕ ಕೆ ಪಿ ಎಸ್ ಗಿಲ್ ಸ್ಥಳಕ್ಕೆ ಧಾವಿಸಿದ್ದಾರೆ. ಸೇನಾ ಮುಖ್ಯಸ್ಥರು ಹಾಗೂ ಪೊಲೀಸ್ ವರಿಷ್ಠರು ಮೌಹಾದಲ್ಲಿರುವ ಶಾಲೆಯಲ್ಲಿ ಸಭೆ ಸೇರಿ ರೈಲು-ರಸ್ತೆ ಸಂಚಾರದಲ್ಲಿ ಅಡೆತಡೆ ನಿವಾರಣೆಗೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದೆಂದು ಸಮಾಲೋಚನೆ ನಡೆಸಿದರು.
ಯಾದವೀ ಕಲಹ :ಇನ್ನೊಂದು ಸಮುದಾಯವಾದ ಮೀನಾ ಸಮುದಾಯದವರೂ ಗುಜ್ಜಾರರನ್ನು ವಿರೋಧಿಸಿ ಬೀದಿಗಿಳಿದಿದ್ದಾರೆ. ಇತ್ತಂಡಗಳಲ್ಲೂ ಮಾರಕಾಯುಧಗಳು ಮೇಳೈಸಿ ಹಿಂಸಾಚಾರ ಹೆಚ್ಚುತ್ತಿದೆ. ಪರಸ್ಪರರ ಘರ್ಷಣೆ ರಾಜ್ಯದಲ್ಲಿ ಅಶಾಂತಿ ಹರಡುವಂತೆ ಮಾಡಿದೆ.
ಅಡ್ವಾಣಿ ಭೇಟಿ : ಇಂದು ಬೆಳಗಿನ ಜಾವ ಬಿಜೆಪಿ ರಾಷ್ಟ್ರೀಯ ಮುಖಂಡರಾದ ಎಲ್.ಕೆ. ಅಡ್ವಾಣಿ ಸೇರಿದಂತೆ ಹಲವು ಮಖಂಡರು ಕೇಂದ್ರ ಗೃಹಮಂತ್ರಿ ಶಿವರಾಜ್ ಪಾಟೀಲರನ್ನು ಭೇಟಿ ಮಾಡಿ ರಾಜಸ್ತಾನದಲ್ಲಿ ಹೆಚ್ಚುತ್ತಿರುವ ಗುಜ್ಜಾರರು ಮತ್ತು ಮೀನಾ ಸಮುದಾಯದವರ ಘರ್ಷಣೆಯ ಕುರಿತು ಚರ್ಚಿಸಿದರು. ಕೇಂದ್ರ ಸರ್ಕಾರವು ರಾಜಸ್ತಾನ ಸರ್ಕಾದಲ್ಲಿ ಮಾಡಿರುವ ಮನವಿಯಂತೆ ಸಮಸ್ಯೆಯನ್ನು ರಾಜಕೀಯವಾಗಿ ಪರಿಹರಿಸಬೇಕೆಂದಿದೆ.
ಮುಖ್ಯಮಂತ್ರಿ ಬದಲಾವಣೆ ಇಲ್ಲ: ರಾಜಸ್ತಾನವನ್ನಾಳುತ್ತಿರುವ ಬಿಜೆಪಿ ಸರ್ಕಾರ ಪ್ರಸಕ್ತ ಘಟನಾವಳಿಗಳಿಂದಾಗಿ ಏಕಾಂಗಿ ಗುಂಪಾಗಿ ಪರಿಗಣಿಸಿದೆ. ಆದಾಗ್ಯೂ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಲಾಗಿದೆ. ಈ ಮಧ್ಯೆ ಮುಖ್ಯಮಂತ್ರಿ ವಸುಂಧರಾ ರಾಜೆ ಇಂದು ಮಧ್ಯಾಹ್ನ ಗುರ್ಜರರೊಂದಿಗೆ ನಾಲ್ಕನೇ ಸುತ್ತಿನ ಸಂಧಾನ ಮಾತುಕತೆ ನಡೆಸುತ್ತಿದ್ದಾರೆ.
|