ಗೋವಾ ವಿಧಾನ ಸಭೆಗಾಗಿ ಶನಿವಾರ ನಡೆದ ಚುನಾವಣೆಯ ಮತ ಎಣಿಕೆ ಇದೀಗ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಿದ್ದು, 19 ಸ್ಥಾನಗಳನ್ನು ಪಡೆದ ಕಾಂಗ್ರೆಸ್‌ಮಿತ್ರ ಪಕ್ಷ ಬಹುಮತದಲ್ಲಿದೆ.
ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ 14 ಸ್ಥಾನಗಳೊಂದಿಗೆ ಮತ್ತೊಮ್ಮೆ ಪ್ರಬಲ ಪೈಪೋಟಿ ನೀಡಿದೆ. ಇತರ ಪಕ್ಷಗಳು 7 ಸ್ಥಾನಗಳನ್ನು ಪಡೆದಿವೆ. ಗೋವಾ ವಿಧಾನ ಸಭೆಯ ಒಟ್ಟು 40 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಹಾಲಿ ಕಾಂಗ್ರೆಸ್ ಸರ್ಕಾರದ ಮುಖ್ಯ ಮಂತ್ರಿಯಾಗಿದ್ದ ಪ್ರತಾಪ ಸಿಂಹ ರಾಣೆ ಪೋರಿಂ ವಿಧಾನ ಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಮನೋಹರ ಪಾರಿಕ್ಕಾರ್ ಪಣಜಿ ಕ್ಷೇತ್ರದಿಂದ ಗೆದ್ದಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿ ದಿನಾರ್ ತರ್ಕಾರ್ ಸೋಲಿಸಿದ್ದಾರೆ.
ಆಡಳಿತಾರೂಢ ಸರ್ಕಾರದ ಶಾಸಕರಾದ ಅಲೆಕ್ಸಿಯೋ ಸಿಕ್ವೇರಾ ಅವರು ಲಾತೋಲಿಂ ಕ್ಷೇತ್ರದಿಂದ ಹಾಗೂ ಸಚಿವ ದಿಗಂಬರ ಕಾಮತ್ ಅವರು ಮಡಗಾಂವ್ ಕ್ಷೇತ್ರದಿಂದ ವಿಜೇತರಾಗಿದ್ದಾರೆ. ದಿಗಂಬರ್ ಅವರು ತಮ್ಮ ನೇರಸ್ಪರ್ಧಿ ಬಿಜೆಪಿ ಅಭ್ಯರ್ಥಿಗಿಂತ 2,186 ಹೆಚ್ಚು ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ಯಾಮ್ ಸರ್ದೇಕರ್ ಗೆಲುವು ಸಾಧಿಸಿದ್ದರೆ, ಫ್ರಾನ್ಸಿಸ್ಕೊಸಿಲ್ವಿಯಾ ವಿಜೇತರಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ರಾಜೇಂದ್ರ ಅರ್ಲೇಕರ ಅವರು ಪರಾಭವಗೊಂಡಿದ್ದಾರೆ. ಎನ್‌ಸಿಪಿಯ ಜೋಸ್ ಫಿಲಿಪ್ ಪ್ರಸ್ತುತ ವಾಸ್ಕೋಡಗಾಮ ಕ್ಷೇತ್ರದಿಂದ ರಾಜೇಂದ್ರ ಅವರನ್ನು ಸೋಲಿಸಿದ್ದಾರೆ. ಆದರೆ ಎನ್‌ಸಿಪಿಯಿಂದ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದ ವಿಲ್ಫ್ರೆಡ್ ಡಿಸೋಜ ಪರಾಭಗೊಂಡು ಪ್ರತಿ ಸ್ಪರ್ಧಿ ಬಿಜೆಪಿಯ ದಿಲೀಪ್ ಪರುಳೇಕರ ಗೆದ್ದಿದ್ದಾರೆ.
ಬಿಜೆಪಿಯ ಹಾಲಿ ಶಾಸಕ ವಿಜಯ್ ಪಾಕೋಟ ಕಾಣಕೋಣ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಕೇಲ 226 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ಬಾಂದೇಕರ್ ಸೋಲುಂಡಿದ್ದಾರೆ.
ಪರಾಭವಗೊಂಡ ಗಣ್ಯರಲ್ಲಿ ವಿಧಾನ ಸಭಾಪತಿ ಫ್ರಾನ್ಸಿಸ್ಕೋ ಸಾರ್ದಿನಾ ಪ್ರಮುಖರಾಗಿದ್ದಾರೆ, ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲಿಮಾವೋ ಅವರ ಸೇವ್‌ಗೋವಾ ಪಕ್ಷದ ಅಭ್ಯರ್ಥಿ ಅಲೆಕ್ಸೋ ಲೋರಾಕೊ ಇವರೆದುರು ಗೆಲುವು ಸಾಧಿಸಿದ್ದಾರೆ.
ರಾಜ್ಯದ ನಲುವತ್ತು ವಿಧಾನ ಸಭಾ ಸ್ಥಾನಗಳಿಗೆ ಸ್ಪರ್ಧಿಸಿದವರ ಸಂಖ್ಯೆ 202, ಇವರಲ್ಲಿ ಪಕ್ಷೇತರರು 49. ಎನ್‌ಸಿಪಿಜೊತೆಯಾದ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖ ಹೋರಾಟ ನಡೆಸಿದ್ದು, ಬಿಜೆಪಿ 33 ಸ್ಥಾನಗಳಿಗೆ, ಕಾಂಗ್ರೆಸ್32 ಸ್ಥಾನಗಳಿಗೆ ಹುರಿಯಾಳುಗಳನ್ನು ಕಣಕ್ಕಿಳಿಸಿದ್ದುವು. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು 26 ಸ್ಥಾನಗಳು, ಸೇವ್‌ಗೋವಾ ಪಕ್ಷ17 ಸ್ಥಾನಗಳಿಗೆ ಸ್ಪರ್ಧಿಸಿದ್ದುವು.
|