ಗುಜ್ಜಾರ ಸಮುದಾಯದ ಮೀಸಲಾತಿ ಬೇಡಿಕೆ ಹಾಗೂ ಅನುಬಂಧಿತ ಹಿಂಸಾಚಾರಗಳ ಹಿನ್ನೆಲೆಯಲ್ಲಿ ನಡೆದ ದೆಹಲಿ ಬಂದ್ ಒಂದು 'ರಾಷ್ಟ್ರೀಯ ಅವಮಾನ' ಎಂದಿರುವ ಸರ್ವೋಚ್ಛನ್ಯಾಯಾಲಯವು ರಾಜಸ್ತಾನ, ಉತ್ತರ ಪ್ರದೇಶ ಹಾಗೂ ದೆಹಲಿ ಸರ್ಕಾರಗಳಿಂದ ವಿವರಣೆ ಕೋರಿದೆ.
ದೆಹಲಿ ಬಂದ್ನ ವೇಳೆ ಸಂಭವಿಸಿದ ಹಿಂಸಾಚಾರ ಹಾಗೂ ಅತಿಕ್ರಮಣ ಕೃತ್ಯಗಳು ಅವಮಾನಕರ, ಆದ್ದರಿಂದ ವಾರಕಾಲ ಮುಂದುವರಿದ ಗುಜ್ಜಾರ ಸಮ ಸಮುದಾಯದ ಪ್ರತಿಭಟನೆಗಳ ವಿವರ ವರದಿ ನೀಡಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ಗುಜ್ಜಾರ ಪ್ರಕರಣಕ್ಕೆ ಸಂಬಂಧಿಸಿ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದ ವಾರಕಾಲಾವಧಿಯ ಹಿಂಸಾಚಾರ ಗಲಭೆ, ಬಂದ್, ಆಸ್ತಿಸೋತ್ತು ನಾಶ, ಜೀವಹಾನಿಗಳ ಘಟನಾವಳಿಗಳನ್ನು ವಾರ್ತಾಮಾಧ್ಯಮಗಳಿಂದ ಮಾಹಿತಿ ಪಡೆದು ಸುಪ್ರೀಂ ಕೋರ್ಟ್ ಸ್ವಯಂಗ್ರಹೀತ ಪ್ರಕರಣ ದಾಖಲಿಸಿ ಪ್ರಸ್ತುತ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.
ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್, ಜಿ.ಕೆ.ಜೈನ್ ಇವರನ್ನೊಳಗೊಂಡ ಪೀಠ ಗುಜ್ಜಾರ ಪ್ರಕರಣಗಳನ್ನು ಅವಲೋಕಿಸಿ ಇದೊಂದು ರಾಷ್ಟ್ರೀಯ ಅವಮಾನ ಎಂದಿದ್ದಾರೆ.
ಶಾಂತ -ಸಹಜ ಸ್ಥಿತಿ : ವಾರದ ಕಾಲ ಗಲಭೆ ಹಿಂಸಾಚಾರದಿಂದ ಕೂಡಿದ ರಾಜಸ್ಥಾನ ಮತ್ತಿತರ ಪ್ರದೇಶಗಳಲ್ಲಿ ಇಂದು ಶಾಂತಿ ನೆಲೆಸಿದೆ, ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಕಳೆದ ದಿನ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಗುಜ್ಜಾರರ ಮುಖಂಡ ಕರ್ನಲ್ ಬೈನ್ಸಾಲಾ ಇವರ ನಡುವಿನ ಸಂಧಾನ ಮಾತುಕತೆಯನ್ವಯ ಸಮಸ್ಯೆ ಪರಿಹರಿಸಲಾಗಿದೆ.
ಸಂಧಾನ ಮಾತುಕತೆಯಂತೆ ಗುಜ್ಜಾರರ ಸಮಸ್ಯೆ ಅಭ್ಯಸಿಸಲು ತ್ರಿಸದಸ್ಯ ಸಮಿತಿಯೊಂದನ್ನು ವಾರದೊಳಗೆ ರಚಿಸಿ ವರದಿ ಸಲ್ಲಿಸಲು ನಿಯೋಜಿಸಲಾಗುತ್ತಿದೆ. ತನ್ಮಧ್ಯೆ, ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆನಿರ್ಮಿಸಿರುವುದನ್ನು ತೆರವು ಗೊಳಿಸಲಾಗಿದೆ.
|