ಕೊಲ್ಲಿ ರಾಷ್ಟ್ರ ಓಮಾನ್‌ನಲ್ಲಿ ಅಪ್ಪಳಿಸಿರುವ 'ಗೊನು' ಚಂಡಮಾರುತ, ಸಾಗರ ಪ್ರಕೋಪದಿಂದ ಜನರು ಸಂಕಷ್ಟಕ್ಕೀಡಾಗಿರುವಂತೆಯೇ, ಭಾರತೀಯ ಸರ್ಕಾರವು ಅಹೋರಾತ್ರಿ ಕಾರ್ಯಾಚರಿಸುವ ಮಾಹಿತಿ-ಸಹಾಯ ಕೇಂದ್ರವನ್ನು ಆರಂಭಿಸಿದೆ.
ಸಂತ್ರಸ್ತ ಪ್ರದೇಶದಲ್ಲಿರುವ 3.86 ಲಕ್ಷದಷ್ಟಿರುವ ಭಾರತೀಯರ ಸುರಕ್ಷಿತತೆ ದೃಢ ಪಡಿಸಲು ಪ್ರಸ್ತುತ ಮಾಹಿತಿ ಕೇಂದ್ರ ಕಾರ್ಯಾಚರಿಸಲಿದೆ. ತೈಲ ಸಂಪನ್ನ ರಾಷ್ಟ್ರ ಓಮಾನ್‌ಗೆ ಅಪ್ಪಳಿಸಿದ ಪ್ರಬಲ ತೂಫಾನ್‌ಗೆ 'ಗೊನು' ಎಂದು ಹೆಸರಿಸಲಾಗಿದೆ.
ಪ್ರತಿ ಗಂಟೆಗೆ 170 ಕಿ.ಮೀ. ವೇಗದಲ್ಲಿ ಅಪ್ಪಳಿಸುವ ಬಿರುಗಾಳಿ ಓಮಾನ್‌ನ ಪೂರ್ವ ಸಮುದ್ರ ತೀರದಲ್ಲಿ ಬೀಸುತ್ತಿದ್ದು, 12 ಮೀಟರ್ ಎತ್ತರಕ್ಕೆ ಸಾಗರದ ದೈತ್ಯ ಅಲೆಗಳು ದಡದತ್ತ ಧಾವಿಸುತ್ತಿವೆ. ತೀರ ಪ್ರದೇಶದ ನಗರಗಳಿಗೆ ಏಕಕಾಲದಲ್ಲಿ ಅಪ್ಪಳಿಸತೊಡಗಿವೆ.
ಓಮನ್ ರಾಷ್ಟ್ರದ ರಾಜಧಾನಿ ಮಸ್ಕತ್‌ನ ರಸ್ತೆಗಳು ಇಂದು ನಿರ್ಜನವಾಗಿದ್ದು, ಅಪಾಯಕ್ಕೆ ಹೆದರಿ ಜನರು ಮನೆಯೊಳಗೆ ಉಳಿದಿದ್ದಾರೆ. ಈ ಹಂತದಲ್ಲಿ ಭಾರತೀಯರ ಕಳವಳವನ್ನು ನಿವಾರಿಸಲು ಭಾರತೀಯ ವಿದೇಶಾಂಗ ವಿಭಾಗವು ಕ್ರಮ ಕೈಗೊಂಡಿದೆ.
ಸಹಾಯ ವಾಣಿ ಮತ್ತು ನಿಯಂತ್ರಣ ಕೊಠಡಿ ಸಂಖ್ಯೆ 0098-24813838 ಹಾಗೂ 0096824812936, ದೆಹಲಿ-01123015300, ಫ್ಯಾಕ್ಸ್ ಸಂಖ್ಯೆ- 01123018158 ಇವುಗಳಲ್ಲಿ ಸಂಪರ್ಕಿಸಬಹುದು. ಸಂತ್ರಸ್ತ ರಾಷ್ಟ್ರದಲ್ಲಿರುವ ಭಾರತೀಯ ಕುಟುಂಬಗಳನ್ನು ಸಂಪರ್ಕಿಸಲೂ ಭಾರತೀಯ ರಾಯಭಾರಿ ಕಚೇರಿ ಪ್ರಯತ್ನಿಸುತ್ತಿದೆ.
|