ರಾಷ್ಟ್ರಪತಿ ಸ್ಥಾನಕ್ಕೆ ತುರುಸಿನ ಸ್ಪರ್ಧೆ ನಡೆಯುತ್ತಿರುವಂತೆಯೇ ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿಯಾಗಿ ಶಿವರಾಜ್ ಪಾಟೀಲ್‌ರನ್ನು ಶುಕ್ರವಾರ ಸೂಚಿಸಿರುವ ಬೆನ್ನಲ್ಲೇ, ಮಿತ್ರ ಪಕ್ಷ ಎನ್‌ಸಿಪಿ ತನ್ನ ವಿರೋಧವನ್ನೂ ವ್ಯಕ್ತಪಡಿಸಿದೆ.
ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಅವಧಿ ಜುಲೈ ಮೊದಲ ವಾರದಲ್ಲೇ ಮುಕ್ತಾಯಗೊಳ್ಳಲಿದೆ. ಆ ನಿಟ್ಟಿನಲ್ಲಿ ಆಡಳಿತ ರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಕಂಡುಬಂದಿದೆ..ಕಾಂಗ್ರೆಸ್ ಪಕ್ಷದಿಂದ ಪ್ರಣಬ್ ಮುಖರ್ಜಿ ಅವರ ಹೆಸರು ಕೇಳಿಬಂದಿತ್ತಾದರೂ ಅಂತಿಮವಾಗಿ ಶಿವರಾಜ್ ಪಾಟೀಲ್‌ರ ಹೆಸರು ದಾಖಲಾಗಿದೆ.
ವಿರೋಧ ಪಕ್ಷ ಬಿಜೆಪಿ ಕಲಾಂ ಅವರನ್ನೇ ಎರಡನೇ ಅವಧಿಗೆ ಮುಂದುವರಿಸುವಂತೆ ಒತ್ತಡ ಹೇರಿತ್ತಾದರೂ,ಎಡಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ಉಳಿದ ಪಕ್ಷಗಳ್ಯಾವು ಆ ಬಗ್ಗೆ ಚಕಾರ ಎತ್ತದೆ ಮೌನವಹಿಸಿದ್ದವು. ಸೋನಿಯಾ ಗಾಂಧಿ ಅವರ ಅಂತಿಮ ನಿಲುವಿಗೆ ಯುಪಿಎ ಮೈತ್ರಿಕೂಡ ಸರ್ವಾನುಮತವನ್ನು ಸೂಚಿಸುವ ಮೂಲಕ ಶಿವರಾಜ್ ಪಾಟೀಲ್ ಅಧಿಕೃತ ಅಭ್ಯರ್ಥಿಯಾಗಿ ಹೊರಹೊಮ್ಮಿದಂತಾಗಿದೆ.
ಆದರೆ ಗುರುವಾರ ರಾತ್ರಿ ಪ್ರಣಬ್ ಮುಖರ್ಜಿ ಅವರು ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್,ಲೋಕ ಜನಶಕ್ತಿಯ ವರಿಷ್ಠ ರಾಮ್ ವಿಲಾಸ್ ಪಾಸ್ವಾನ್ ಮತ್ತು ಪಾಟಾಳ್ ಮಕ್ಕಳ್ ಕಚ್ಚಿ ಮುಖ್ಯಸ್ಥ ಅಂಬುಮಣಿ ರಾಮದಾಸ್ ಅವರೊಂದಿಗೆ ಮಾತುಕತೆ ನಡೆಸಿದ್ದು,ಇಂದು ಕೆಲವು ವರಿಷ್ಠರನ್ನು ಭೇಟಿಯಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ಡಿಎಂಕೆ ವರಿಷ್ಠ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿಯವರು ಸೋನಿಯಾಗಾಂಧಿ ಅವರ ಆಯ್ಕೆಗೆ ತನ್ನ ಬೆಂಬಲ ಎಂದು ಘೋಷಿಸಿದರು.
ಆದರೆ ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ ಮತ್ತು ಎಡಪಕ್ಷಗಳ ಬೆಂಬಲವೂ ಅತ್ಯಗತ್ಯವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸೋನಿಯಾ,ಪ್ರಣಬ್ ಮುಖರ್ಜಿ ಅವರು ಹಿರಿಯರು ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಾಗಿರುವುದರಿಂದ ಅವರನ್ನು ಈ ಸ್ಥಾನಕ್ಕೆ ಆರಿಸಿಲ್ಲ ಎಂದು ತಿಳಿಸಿದರು.
|