ವಿಶಾಖ ಪಟ್ಟಣಂ ನಿಂದ 20 ಕಿ.ಮೀ ದೂರದ ದೂವಾಡ ಎಂಬಲ್ಲಿ ಹೌರಾ-ನಾಗರಕೋವಿಲ್ ಸೂಪರ್ ಫಾಸ್ಟ್ ರೈಲುಗಾಡಿ ಹಳಿತಪ್ಪಿ ಸಂಭವಿಸಿದ ದುರಂತದಲ್ಲಿ 3 ಮಂದಿ ಪ್ರಯಾಣಿಕರು ಮೃತ ಪಟ್ಟು ನೂರಕ್ಕೂ ಅಧಿಕಮಂದಿ ತೀವ್ರ ಗಾಯಗೊಂಡಿದ್ದಾರೆ.
ಅತಿ ವೇಗದಲ್ಲಿದ್ದ ರೈಲು ಗಾಡಿ ಹಳಿಯಲ್ಲಿ ಕುಪ್ಪಳಿಸಿದಂತಾಗಿ ದುರ್ಘಟನೆ ಸಂಭವಿಸಿದೆ ಎಂಬುದಾಗಿ ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಆದರೆ ನಿಖರ ಕಾರಣಗಳೇನು ಎಂಬ ಕುರಿತು ತನಿಖೆ ಸಾಗಿದೆ. ರೈಲ್ವೇ ಮೂಲಗಳ ಪ್ರಕಾರ 11 ಬೋಗಿಗಳು ಹಳಿತಪ್ಪಿ ಹೊರಳಿಬಿದ್ದಿವೆ.
ಮೃತ ಪಟ್ಟ ವ್ಯಕ್ತಿಯನ್ನು ವಿಶಾಕ ಪಟ್ಟಣಂ ಮೂಲದ ಎಂ ಪ್ರಸಾದ ರಾವ್(51),ವೀರೇಂದ್ರ(61), ಎಸ್ ಸಾಯೆನ್(35) ಎಂದು ಗುರುತಿಸಲಾಗಿದೆ ಎಂಬುದಾಗಿ ಪೂರ್ವ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಕೆ. ಮಿಶ್ರ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡವರನ್ನು ಒರಿಸ್ಸಾದ ಬಿನೋದಿನಿ ಜೇನಾ , ಡೇವಿಡ್ ಫಅರಾನ್ಸಿಸ್ ಪಶ್ಚಿಮ ಬಂಗಾಳ ಎಂದು ಗುರುತಿಸಲಾಗಿದೆ.ಇತರ ಗಾಯಾಳುಗಳನ್ನು ವಿಶಾಖಪಟ್ಟಣಂದಲ್ಲಿರುವ ಕಿಂಗ್ ಜಾರ್ಜ್ ಆಸ್ಪತ್ರೆ ಹಾಗೂ ರೈಲ್ವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರಂತದ ಮಾಹಿತಿ ತಿಳಿದೊಡನೆಯೇ ಸತ್ಯಂ ತುರ್ತು ಕಾರ್ಯಾಚರಣೆ ಸೇವಾವ ವಿಭಾಗದವರು 5 ರುಗ್ಣವಾಹನಗಳ ಘಟಕದೊಂದಿಗೆ ಧಾವಿಸಿದ್ದು, ಪೊಲೀಸರು, ಅಗ್ನಿಶಾಮಕ ದಳ ಮತ್ತಿತರ ಸುರಕ್ಷಾ ವಿಭಾಗಗಳು ರಕ್ಷಣಾ ಕಾರ್ಯಗಳಲ್ಲಿ ನೇರವಾಗಿವೆ.
|