ಗೋವಾ ರಾಜ್ಯದ ನೂತನ ವಿಧಾನಸಭಾಧ್ಯಕ್ಷ (ಸ್ಫೀಕರ್) ನಿಕಟಪೂರ್ವ ಮುಖ್ಯಮಂತ್ರಿ ಕಾಂಗ್ರೆಸ್‌ಎನ್‌ಸಿಪಿ ಅಭ್ಯರ್ಥಿ ಪ್ರತಾಪ ಸಿಂಹ ರಾಣೆ ನಿಯುಕ್ತರಾಗಿದ್ದಾರೆ. ಕಳೆದ ವಾರ ಮುಖ್ಯಮಂತ್ರಿ ಗಾದಿಗಾಗಿ ಪೈಪೋಟಿಯಲ್ಲಿ ಸೋತರೂ ಅವರು ಈಗ ಗೆದ್ದಂತಾಗಿದೆ.
ಪ್ರವಾಸಿಗಳ ಸ್ವರ್ಗವಾಗಿರುವ ಗೋವಾದಲ್ಲಿ ಮಳೆಗಾಲದ ಹಂಗಾಮು ಎಂದರೆ ತಣ್ಣಗಿರುತ್ತದೆ. ಆದರೆ ಈ ಬಾರಿ ಮಾತ್ರ ಬಿಸಿಬಿಸಿ, ಕಾರಣವಿಷ್ಟೇ- ಬಿಸಿಏರಿದ ರಾಜ್ಯರಾಜಕಾರಣ. ಬೇಸಗೆಯ ಕೊನೆಯಲ್ಲಿ ಚುನಾವಣೆ, ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಗಾಗಿ ಸ್ಪರ್ಧೆ, ಆ ಬಳಿಕ ಇದೀಗ ಸ್ಪೀಕರ್ ಆಯ್ಕೆಯ ಮೇಲಾಟ.
ಪ್ರತಾಪ ಸಿಂಹ ರಾಣೆ ಅವರನ್ನು ನೂತನ ವಿಧಾನ ಮಂಡಲದ ಸ್ಪೀಕರ್ ಆಗಿ ನೇಮಕಮಾಡುವ ಮೂಲಕ ಶಾಸಕಾಂಗ ಪಕ್ಷ ಅವರಿಗೆ ಅರ್ಹ ಸ್ಥಾನ ನೀಡಿದೆ. ಆದರೆ ಇವರ ಪ್ರತಿಸ್ಪರ್ಧಿ ಪಕ್ಷದ ಪ್ರಮುಖ ರವಿ ನಾಯ್ಕ್ ಅವರಿಗೆ ಇನ್ನೂ ಯೋಗ್ಯ ಸ್ಥಾನಮಾನ ಲಭಿಸಿಲ್ಲ.
ವಾರದ ಹಿಂದೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಬಹುಮತದ ಪಕ್ಷವಾಗಿ ಹೊರಹೊಮ್ಮಿದಾಗ ಮುಖ್ಯಮಂತ್ರಿ ಪ್ರತಾಪಸಿಂಹ ರಾಣೆ, ಪ್ರತಿಸ್ಪರ್ಧಿ ರವಿ ನಾಯ್ಕ್ ಮುಂದಿನ ಮುಖ್ಯ ಮಂತ್ರಿಯಾಗಲು ಪ್ರಬಲ ಸ್ಪರ್ಧೆ ನೀಡಿದ್ದರು.
ಆದರೆ ಕಾಂಗ್ರೆಸ್ ಹೈಕಮಾಂಡಿನ ಚಮತ್ಕಾರಿಕ ರಾಜಕೀಯ ದಾಳ ಎಸೆತದಿಂದಾಗಿ ಈ ಇಬ್ಬರು ಅಭ್ಯರ್ಥಿಗಳೂ ಮುಖ್ಯಮಂತ್ರಿಯಾಗದೇ, ಇನ್ನೋರ್ವ ಪ್ರಮುಖ ದಿಗಂಬರ ಕಾಮತ್ ಮುಖ್ಯಮಂತ್ರಿ ಎಂದು ಘೋಷಿಸಲ್ಪಟ್ಟಿದ್ದರು.
ಮುಖ್ಯಮಂತ್ರಿ ಆಯ್ಕೆಯಲ್ಲಿ ಹಿಂದೆ ಸರಿದರೂ ಇದೀಗ ಪ್ರತಪ ಸಿಂಹ ರಾಣೆ ಅವರು ಸ್ಪೀಕರ್ ಆಗಿ ನಿಯುಕ್ತರಾಗಿರುವುದರಿಂದ ಘನತೆ ವಾಪಸ್ ನೀಡಿದಂತಾಗಿದೆ. ಸದ್ಯ ಅಲ್ಲಿ ಉಳಿದಿರುವ ಅತೃಪ್ತರೆಂದರೆ ರವಿನಾಯ್ಕ್ ಮತ್ತು ಅವರ ಬೆಂಬಲಿಗರು ಮಾತ್ರ ಎಂಬುದು ಕುತೂಹಲದ ವಿಷಯ.
|