ಜುಲೈ 19ರಂದು ಜರುಗಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪ್ರಮುಖ ಸಮಾಜವಾದಿ ಪಕ್ಷ ಭಾನುವಾರ ನವದೆಹಲಿಯಲ್ಲಿ ಸಭೆಯೊಂದನ್ನು ಹಮ್ಮಿಕೊಂಡಿದೆ.
ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇದಾಗಿದ್ದು, ದೇಶದಲ್ಲಿ ಆಗುತ್ತಿರುವ ಪ್ರಮುಖ ರಾಜಕೀಯ ಬೆಳವಣಿಗೆ ಮತ್ತು ಬದಲಾವಣೆ ಕುರಿತು ಪಕ್ಷದ ಹಿರಿಯ ನಾಯಕರು ಸುಧೀರ್ಘವಾಗಿ ಚರ್ಚಿಸುವ ಸಾಧ್ಯತೆಗಳಿವೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ದೇಶದಲ್ಲಿ ಒಟ್ಟು ಎಂಟು ಪ್ರಾದೇಶಿಕ ಪಕ್ಷಗಳು ಸೇರಿ ಇತ್ತೀಚೆಗಷ್ಟೆ ನೂತನವಾಗಿ ಹುಟ್ಟುಹಾಕಿರುವ 'ತೃತೀಯ ರಂಗ'ದ ಪ್ರಮುಖ ಪಕ್ಷವಾದ ಸಮಾಜವಾದಿ, ಭಾನುವಾರದ ಮಹತ್ವದ ಸಭೆಯಲ್ಲಿ ರಾಷ್ಟ್ರಪತಿ ಚುನಾವಣೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈಗಾಗಲೇ ಎನ್‌ಡಿಎ ಮತ್ತು ಯುಪಿಎ ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 'ತೃತೀಯ ರಂಗ' ಯಾರನ್ನು ಬೆಂಬಲಿಸಬೇಕು ಇಲ್ಲವೇ ತಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ ಎಂಬುದರ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಿದೆ.
ಅಷ್ಟೆ ಅಲ್ಲದೆ ಪಕ್ಷ ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟಿದ್ದು, ಸೋಲಿಗೆ ಕಾರಣಗಳೇನು ಎಂಬುದನ್ನು ಸಹ ಶೋಧಿಸಲಿದೆ.
ಜೊತೆಗೆ ಪಕ್ಷದ ನೂತನ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಮಹತ್ತರ ವಿಷಯಗಳ ಕುರಿತು ಇದೇ ಸಂದರ್ಭದಲ್ಲಿ ಚರ್ಚೆ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
|