ಯಾರಿಗಾದರೂ ಉತ್ತಮಕಾಲ, ಸಂಪತ್ಸಮೃದ್ಧಿ ಒಲಿದರೆ, 'ಶುಕ್ರದೆಸೆ' ಅನ್ನುವುದು ಜನರಲ್ಲಿ ರೂಢಿ. ರಾತ್ರಿ ಬೆಳಕು ನೀಡುವ ಚಂದಿರನಿಗೆ ಇದೀಗ ಶುಕ್ರದೆಸೆ. ದೆಹಲಿಯ ಜನರಿಗೆಅದನ್ನು ನೋಡುವ ಅದೃಷ್ಟ.
ಸೌರಮಂಡಲದಲ್ಲಿ ವಿರಳವಾಗಿ ಸಂಭವಿಸುವ ವಿದ್ಯಮಾನಗಳಲ್ಲಿ ಇದೂ ಒಂದು. ಭೂಮಿಯ ಉಪಗ್ರಹವಾದ ಚಂದ್ರ ಹಾಗೂ ಸೌರವ್ಯೂಹದಲ್ಲಿ ಸೂರ್ಯನಿಗೆ ನಿಕಟವಾಗಿರುವ ಎರಡನೇ ಗ್ರಹ ಶುಕ್ರ ಇವೆರಡರ ಭ್ರಮಣಪಥದಲ್ಲಿ ಪರಸ್ಪರ ಸಮೀಪ ಬಂದುದರಿಂದ ಅರ್ಧಚಂದ್ರಾಕಾರ ರೂಪದಲ್ಲಿ ಕಾಣಿಸಿರುವುದು ವಿಶೇಷ ದೃಶ್ಯವಾಗಿದೆ.
ದೆಹಲಿಯಲ್ಲಿ ಕಳೆದ ರಾತ್ರಿ ಈ ರೋಚಕ ದೃಶ್ಯ ಶುಭ್ರ ಆಕಾಶದಲ್ಲಿ ಕಾಣಿಸಿತು. ವಿಜ್ಞಾನಿಗಳು ಈ ಕುರಿತು ಅಧ್ಯಯನಕ್ಕೆ ಸಿದ್ಧರಾದರೆ, ಕುತೂಹಲಿಗರು ದೂರದರ್ಶಕ ಯಂತ್ರಗಳೊಂದಿಗೆ ಚಂದ್ರನ 'ಶುಕ್ರದೆಸೆ ' ವೀಕ್ಷಿಸಿ ಧನ್ಯರಾದರು.
ಸೌರವ್ಯೂಹದಲ್ಲಿ ಸೂರ್ಯನಿಗೆ ಸುತ್ತುಹಾಕುವ ಚಲನೆಯ ಭ್ರಮಣಪಥದಲ್ಲಿ ಇವೆರಡೂ ಆಕಾಶ ಕಾಯಗಳು ಪರಸ್ಪರ ತೀರಾ ನಿಕಟವಾಗಿ ಚಲಿಸುವ ದೃಶ್ಯ ಅತ್ಯಂತ ಅಪರೂಪ. ಸಂದರ್ಭಗಳೂ ವಿರಳ.
|