ಕಾಂಗ್ರೆಸ್ ಹಾಗೂ ಎಡಪಂಥೀಯ ಸಂಘಟನೆಗಳ ಅಭ್ಯರ್ಥಿಯಾಗಿರುವ ರಾಜಸ್ಥಾನದ ರಾಜ್ಯಪಾಲ ಪ್ರತಿಭಾ ಪಾಟೀಲ್ ಅವರ ನಾಮಪತ್ರ ಸಲ್ಲಿಕೆಗೆ ಅಗತ್ಯವಿರುವ ದಾಖಲೆಪತ್ರಗಳ ಸಿದ್ಧತೆಯನ್ನು ಕಾಂಗ್ರೆಸ್ ಮಂಗಳವಾರ ನಡೆಸಿದೆ.
ಪ್ರತಿಭಾ ಅವರ ಹೆಸರನ್ನು ಸೂಚಿಸಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇದೀಗ ನಾಮಪತ್ರ ಸಲ್ಲಿಸುವ ವಿಷಯದಲ್ಲೂ ನೇತೃತ್ವವಹಿಸಿದ್ದಾರೆ. ನಾಳೆ ಅಥವಾ ಈ ವಾರದಲ್ಲಿ ಪ್ರತಿಭಾ ಪಾಟೀಲ್ ನಾಮಪತ್ರಸಲ್ಲಿಸುವ ನಿರೀಕ್ಷೆ ಇದೆ.
ಹಾಲಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಎರಡನೇ ಅವಧಿಗೆ ಆರಿಸಬೇಕೆಂಬ ತೃತೀಯ ರಂಗದ ವಿನಂತಿಯನ್ನು ಯುಪಿಎ ತಿರಸ್ಕರಿಸಿದಂತಿದೆ. ಪ್ರಬಲ ವಿರೋಧ ಪಕ್ಷ ಎನ್‌ಡಿಎ ಪಕ್ಷೇತರ ಅಭ್ಯರ್ಥಿ ಭೈರೋನ್ ಸಿಂಗ್ ಶೆಕಾವತ್ ಅವರನ್ನು ಬೆಂಬಲಿಸಲು ನಿರ್ಧರಿಸಿದೆ. ಆದರೆ ಯಾವುದೇ ಕ್ಷಣ ರಾಜಕೀಯ ಬದಲಾವಣೆಗಳು ನಿರೀಕ್ಷಿತ.
ತನ್ಮಧ್ಯೆ, ಯುಪಿಎ ಮುಂದಾಳು ಪ್ರಧಾನಿ ಮನಮೋಹನ್ ಸಿಂಗ್ ಅವರು ಇಂದು ಸಂಜೆ ರಾಷ್ಟ್ರಪತಿ ಕಲಾಂ ಅವರನ್ನು ಭೇಟಿ ಮಾಡಲಿದ್ದಾರೆ. ತೃತೀಯ ರಂಗದ ನಾಯಕರು ಬುಧವಾರದಂದು ರಾಷ್ಟ್ರಪತಿ ಭೇಟಿಗೆ ಸಿದ್ಧತೆ ನಡೆಸಿವೆ.
|