ರಾಷ್ಟ್ರಪತಿ ಚುನಾವಣೆಗಾಗಿ ಎರಡನೇ ಅವಧಿಗೆ ಸ್ಪರ್ಧಿಸುವಂತೆ ಮನವೊಲಿಸಲು ಸಮಾನಮನಸ್ಕ ವಿವಿಧ ಪಕ್ಷಗಳ ತೃತೀಯರಂಗವಾದ ರಾಷ್ಟ್ರೀಯ ಪ್ರಗತಿಪರ ಒಕ್ಕೂಟ (ಯುಎನ್‌ಪಿಎ) ಇಂದು ಅಪರಾಹ್ನ ರಾಷ್ಟ್ರಪತಿ ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡುತ್ತಿದೆ.
ಆದರೆ ಪ್ರಸ್ತುತ ಒಕ್ಕೂಟದ ನಿಯೋಗದಲ್ಲಿ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಎಐಎಡಿಎಂಕೆ ನಾಯಕಿ ಜಯಲಲಿತಾ ಭಾಗವಹಿಸಿಲ್ಲ. ಅವರ ಪಕ್ಷದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಎಲ್ಲಾ ಪಕ್ಷಗಳ ಸರ್ವಸಮ್ಮತ ಅಭ್ಯರ್ಥಿಯಲ್ಲವಾದರೆ ಕಲಾಂ ಎರಡನೇ ಅವಧಿಗೆ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎಂಬ ಸೂಚನೆ ಲಭಿಸಿರುವುದರಿಂದ, ಜಯಲಲಿತಾ ಅವರು ಕೊನೆಯ ಕ್ಷಣದಲ್ಲಿ ದೆಹಲಿ ಪ್ರವಾಸದಿಂದ ಹಿಂದೆಸರಿದರೆಂದು ಮಾಹಿತಿ ಲಭಿಸಿದೆ.
ಆದರೆ ಜಯಲಲಿತಾ ಪಕ್ಷದ ಪ್ರಮುಖರಾದ ಎಂ ತಂಬಿ ದುರೈ,ಕೆ ಮಲೈಚಾಮಿ ಪ್ರಾತಿನಿಧ್ಯವಹಿಸುವರು. ಇತರ ಪ್ರಮುಖ ಮುಖಂಡರೆಂದರೆ ಸಮಾಜ ವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್,ಟಿಡಿಪಿಯ ಚಂದ್ರಬಾಬು ನಾಯ್ಡು, ಓಂ ಪ್ರಕಾಶ್ ಚೌತಾಲ ಮುಂತಾದವರಾಗಿದ್ದಾರೆ.
ತನ್ಮಧ್ಯೆ ಕಾಂಗ್ರೆಸ್ ಎಡರಂಗದ ಯುಪಿಎ ಸಂಘಟನೆ ತಮ್ಮ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರ ಪರವಾಗಿ ರಾಷ್ಟ್ರಪತಿ ಚುನಾವಣಾ ಚಟುವಟಿಕೆಯಲ್ಲಿ ಮುಂದುವರಿದಿವೆ, ಮತಯಾಚನೆ ಆರಂಭಿಸಿವೆ.
ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಕಾವತ್ ಅವರು ಪ್ರತಿಭಾ ವಿರುದ್ಧ ಸ್ಪರ್ಧಿಸುವರು. ಆದರೆ ಡಾ. ಕಲಾಂ ಸ್ಪರ್ಧಿಸುವುದಿದ್ದರೆ ಕಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.
|