ಎಲ್ಲಾ ಪಕ್ಷಗಳಲ್ಲೂ 'ಸ್ಥಿರತೆ' ನಿಖರತೆ, ಏಕಾಭಿಪ್ರಾಯವಿದೆ ಎಂದಾದರೆ ಡಾ ಎಪಿಜೆ ಅಬ್ದುಲ್ ಕಲಾಂ ಅವರು ಎರಡನೇ ಅವಧಿಗೆ ರಾಷ್ಟ್ರಪತಿಯಾಗಲು ಸ್ಪರ್ಧಿಸುವರು ಎಂಬುದಾಗಿ ತೃತೀಯ ರಂಗ(ಯುಎನ್‌ಪಿಎ) ನಿಯೋಗದ ಸಾರಥ್ಯ ವಹಿಸಿದ ಚಂದ್ರಬಾಬು ನಾಯ್ಡು ಉದ್ಘರಿಸಿದ್ದಾರೆ.
ಆದರೆ, ರಾಷ್ಟ್ರಪತಿ ಚುನಾವಣೆಯ ಮತದಾರರಲ್ಲಿ ಸರ್ವಸಮ್ಮತ ಅಭ್ಯರ್ಥಿಯಾಗುವುದು ಸಾಧ್ಯವಿದ್ದರೆ, ಸರ್ವಪಕ್ಷಗಳಲ್ಲಿ ಏಕಾಭಿಪ್ರಾಯವಿದ್ದರೆ ಮಾತ್ರ ತಾನು ಈ ಪ್ರಕರಣದ ಕುರಿತು ಚಿಂತಿಸುವುದಾಗಿ ರಾಷ್ಟ್ರಪತಿ ಡಾ. ಕಲಾಂ ತೃತೀಯರಂಗದ ನಿಯೋಗಕ್ಕೆ ತಿಳಿಸಿದರೆಂದು ಹೇಳಲಾಗಿದೆ.
ರಾಷ್ಟ್ರಪತಿಯವರನ್ನು ನಿಯೋಗದೊಂದಿಗೆ ಭೇಟಿಯಾದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಆದರೆ ,'ಸ್ಥಿರತೆ' ಎಂದರೆ ಏನು ಎಂಬುದರ ಕುರಿತು ವಿವರಣೆ ನೀಡಲು ಮುಖಂಡರು ನಿರಾಕರಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ಥಿರತೆ ಇದ್ದರೆ ಕಲಾಂ ದ್ವಿತೀಯಾವಧಿ ಸ್ಪರ್ಧೆ ಸಾಧ್ಯ ಎಂದಿದ್ದಾರೆ.
ನಿಯೋಗದಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರೊಂದಿಗೆ ಸಮಾಜವಾದಿ ಪಕ್ಷ ಮುಖಂಡರಾದ ಮುಲಾಯಂ ಸಿಂಗ್ ಯಾದವ್, ಅಮರ್ ಸಿಂಗ್,ಐಎನ್‌ಎಲ್‌ಡಿ ಮುಖಂಡ ಓಂ ಪ್ರಕಾಶ ಚೌತಾಲ,ಎಂಡಿಎಂಕೆ ಮುಖಂಡ ವೈಕೊ,ಎಜಿಪಿ ಮುಖಂಡ ಬ್ರಿಂದಾಬನ್ ಗೋಸ್ವಾಮಿ ಹಾಗೂ ಎಐಎಡಿಎಂಕೆ ಪ್ರಮುಖರಾದ ಪ್ರಮುಖರಾದ ಎಂ ತಂಬಿ ದುರೈ,ಕೆ ಮಲೈಚಾಮಿ ಪಾಲ್ಗೊಂಡಿದ್ದರು. ನಾಯಕಿ ಜಯಲಲಿತಾ ಗೈರು ಹಾಜರಿದ್ದರು.
|