ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರು ರಾಜಸ್ತಾನ ರಾಜ್ಯಪಾಲರಾಗಿರುವ ತಮ್ಮ ಹುದ್ದೆಗೆ ಇಂದು ರಾಜೀನಾಮೆ ನೀಡಿದ್ದಾರೆ.
ಇಂದು ದೆಹಲಿಗೆ ಆಗಮಿಸಿದ ಅವರು ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲಿರುವುದರಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯಪಾಲರಾಗಿದ್ದ ಅವಧಿಯಲ್ಲಿ ತನಗೆ ರಾಷ್ಟ್ರಪತಿ ಕಲಾಂ ಅವರು ಉತ್ತಮ ಸಹಕಾರ ಹಾಗೂ ಮಾರ್ಗದರ್ಶನ ಮಾಡದ್ದರು ಎಂದು ಬಳಿಕ ವಾರ್ತಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ತಿಳಿಸಿದ ಪ್ರತಿಭಾ ಪಾಟೀಲ್, ಕಲಾಂ ಅವರಿಗೆ ಆಯುರಾರೋಗ್ಯ ಭಾಗ್ಯಕ್ಕಾಗಿ ಹಾರೈಸಿದರು.
ಜುಲೈ 19ರಂದು ಮತದಾನ ನಡೆಯುವ ವರೆಗೆ ಪ್ರತಿಭಾ ಪಾಟೀಲ್ ದೆಹಲಿಯಲ್ಲಿ ನೆಲೆಸುವರು, ಇದಕ್ಕಾಗಿ ಸೌತ್ ಅವೆನ್ಯೂ ರಸ್ತೆಯಲ್ಲಿ ಸಂಸದರ ಭವನದಲ್ಲಿ ಅವಕಾಶ ಕಲ್ಪಿಸಲಾಗಿದೆ.
|