ಮುಂಗಾರು ಮಳೆ ಪ್ರಬಲವಾಗಿರುವಂತೆಯೇ ಸಾವುನೋವಿನ ಕಳವಳಕಾರಿ ಘಟನೆಗಳು ವರದಿಯಾಗತೊಡಗಿದ್ದು,ಪ್ರವಾಹಗ್ರಸ್ತ ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲಿ ಒಟ್ಟು55 ಮಂದಿ ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶದಲ್ಲಿ 45 ಮಂದಿ ಅಸುನೀಗಿದ್ದರೆ, ಪ್ರವಾಹದ ಮಧ್ಯೆ ಸಿಲುಕಿರುವ ಕಾಲೋನಿಗಳು, ಗ್ರಾಮಗಳ ಜನರನ್ನು ಪಾರುಮಾಡಲು ಸೇನೆ ಕಾರ್ಯಾಚರಿಸುತ್ತಿದೆ. ಇದೇ ವೇಳೆ ಕೇರಳ ರಾಜ್ಯದಲ್ಲಿ ಸಂಭವಿಸಿದ ವಿವಿಧ ದುರ್ಘಟನೆಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದಿಂದಾಗಿ ಕುಂಭದ್ರೋಣ ಮಳೆಸುರಿಯುತ್ತಿದ್ದು, ಮಳೆ,ಗಾಳಿ,ನದಿ ಪ್ರವಾಹದಿಂದಾಗಿ ಸಾವುನೋವು ಆಸ್ತಿಪಾಸ್ತಿ ಹಾನಿಯ ಪ್ರಮಾಣ ಹೆಚ್ಚುತ್ತಿದೆ.
ಆಂಧ್ರಪ್ರದೇಶದ ಕುರ್ನೂಲ್, ಗುಂಟೂರ್,ಪ್ರಕಾಶಂ,ಮಹಬೂಬನಗರ್‌ಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ರಸ್ತೆ, ವಾರ್ತಾ ಸಂಪರ್ಕ ಸಾಧನಗಳು ಅಸ್ತವ್ಯಸ್ತವಾಗಿದೆ.ಕರ್ನೂಲ್‌ನಲ್ಲಿ ಮಾತ್ರ ಸಾವಿನ ಸಂಖ್ಯೆ 20ಕ್ಕೇರಿದೆ.
ಸಂತ್ರಸ್ತರ ಪುನರ್ವಸತಿಗಾಗಿ 90 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.40ರಷ್ಟು ಕೊಳಗಳು ಕಟ್ಟೆಯೊಡೆದು ಹರಿದಿವೆ. ಪರಿಸ್ಥಿತಿ ಬಿಗಡಾಯಿಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಮೃತರ ಕುಟುಂಬಕ್ಕೆ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಸ್ವತಃ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
ಪ್ರವಾಹ ಬಾಧಿತ ಕೇರಳದಲ್ಲಿ ರೈಲು, ಮತ್ತಿತರ ಸಂಸಪರ್ಕಗಳು ಬಾಗಶಃ ಹಾನಿಗೊಂಡಿವೆ. ಸಂತ್ರಸ್ತ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
|