ಕರ್ನಾಟಕ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಮಳೆಯ ಪ್ರಕೋಪ ಏರುತ್ತಿದ್ದು ಸಾವಿನ ಸಂಖ್ಯೆ ಒಟ್ಟು 200ಕ್ಕೇರಿದೆ. ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ.
ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಮಳೆಯ ರುದ್ರನರ್ತನ , ಸಾವುನೋವು, ಆಸ್ತಿ ಹಾನಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಪರಿಸ್ಥಿಯ ಅವಲೋಕನ ನಡೆಸಿದ್ದಾರೆ. ರಾಜ್ಯಾಡಳಿತಗಳ ಮುಖ್ಯಸ್ಥರೊಂದಿಗೆ ಪರಿಹಾರಕ್ರಮಕ್ಕೆ ಸೂಚಿಸಿ, ನೆರವು ಘೋಷಿಸಿದ್ದಾರೆ.
ಉಡುಪಿಯಲ್ಲಿ ವಿವಿಧ ನದಿ, ಜಲಾಶಯಗಳು ಅಪಾಯ ಮಟ್ಟ ಮೀರಿವೆ.ಕರ್ನಾಟಕದಲ್ಲೂ ಪರಿಸ್ಥಿತಿ ಬಿಗಡಾಯಿಸಿದೆ , ಸಾವಿನ ಸಂಖ್ಯೆ 40ಕ್ಕೇರಿದೆ. ಮಲೆನಾಡು, ಕರಾವಳಿ ಬಯಲು ಸೀಮೆಗಳಲ್ಲಿ ಮಳೆ ಗಾಳಿ ತೀವ್ರವಾಗಿ ಆಸ್ತಿಪಾಸ್ತಿ ಹಾನಿಯಾಗಿದೆ. ಸಮುದ್ರತೀರದಲ್ಲಿ ಕಡಲ್ಕೊರೆತ ಹೆಚ್ಚಿದ್ದರೆ, ನದಿಗಳು ಮೇರೆ ಮೀರಿ ಹರಿಯುತ್ತಿವೆ.
ಕೊಡಗಿನಲ್ಲಿ ಕಾವೇರಿ ದಡ ಮೀರಿ ಹರಿಯುತ್ತಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಈ ವರೆಗೆ 1 ಸಾವು ಸಂಭವಿಸಿದೆ. ಬೆಳಗಾವಿಯ ನಭಾಪುರದಲ್ಲಿ ಮನೆ ಕುಸಿದು ಓರ್ವ ಹಾಗೂ ಇನ್ನೋರ್ವ ಜವಳಗಾಳ ಗ್ರಾಮದಲ್ಲಿ ಕುಸಿದ ಗೋಡೆಯಡಿ ಸಿಲುಕಿ ಮೃತಪಟ್ಟಘಟನೆ ಸಂಭವಿಸಿದೆ.
ಬೆಳಗಾಂ, ಕೊಡಗು, ಬಿಜಾಪುರ, ರಾಯ್ಚೂರು, ಗುಲ್ಬರ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಮಾನ್ಯ ಜನಜೀವನ ಅಸ್ತವಯಸತವಾಗಿದೆ. ನೆರೆಹಾವಳಿ, ಕಡಲ್ಕೊರೆತ ತುರಿಯಾವಸ್ಥೆ ತಲುಪಿದೆ.ಭಾಗಮಂಡಲ ರಸ್ತೆಯಲ್ಲಿ ನೆರೆಹಾವಳಿ,ಸೇತುವೆ ಕುಸಿತದಿಂದ ಸಂಚಾರಸ್ಥಗಿತವಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಪ್ರದೇಶದ ಮಾಸ್ಕಿ ಜಲಾಶಯ ತುಂಬಿ ತುಳುಕುತ್ತಿದೆ.
ಕಳೆದ ದಿನಗಳಲ್ಲಿ ದುಃಸ್ಥಿತಿಯಲ್ಲಿದ್ದ ಕೇರಳ ಹಾಗೂ ಆಂಧ್ರಪ್ರದೇಶಗಳಲ್ಲೀಗ ಸ್ಥಿತಿ ಸುಧಾರಿಸುತ್ತಿದ್ದು, ಪ್ರವಾಹ ಇಳಿಮುಖವಾಗುತ್ತಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.ಆದರೂ ಸಾವಿನ ಸಂಖ್ಯೆ 80 ದಾಖಲಿಸಿದೆ.
ಕಳೆದ 24 ತಾಸುಗಳಲ್ಲಿ ಮುಂಬೈ ಹಾಗೂ ನಿಕಟವರ್ತಿ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ5ರಷ್ಟಾಗಿದೆ. ಹವಾಮಾನ ಅಧಿಕಾರಿಗಳ ಪ್ರಕಾರ ಮಳೆ ಮತ್ತಷ್ಟು ಪ್ರಬಲವಾಗುತ್ತಿದೆ. ಬಿರುಗಾಳಿಯ ವೇಗ ಮತ್ತಷ್ಟು ಹೆಚ್ಚುತ್ತಿದೆ.
ಬೃಹನ್ಮುಂಬೈಯನ್ನು ಸಂಪರ್ಕಿಸುವ ವಿಮಾನ ಹಾಗೂ ರೈಲುಗಾಡಿಗಳನ್ನು ಮಳೆ -ಗಾಳಿಯ ಕಾರಣದಿಂದ ವಿಳಂಬ ಮಾಡಲಾಗಿದೆ ಅಥವಾ ತಡೆಹಿಡಿಯಲಾಗಿದೆ. ಗ್ರೇಂಟ್ ರೋಡ್ ಪ್ರದೇಶದಲ್ಲಿ ಕಟ್ಟಡ ಕುಸಿದು 2 ಮಂದಿ ಹಾಗೂ ಗೋಡೆ ಕುಸಿದು3 ಮಂದಿ ಸಾವನ್ನಪ್ಪಿದ್ದಾರೆ.
|