ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾಪಾಟೀಲ್ ದೋಷಿ ಎಂಬರ್ಥದಲ್ಲಿ ಎಲ್‌ಕೆ ಅಡ್ವಾಣಿ ನೀಡಿರುವ ಹೇಳಿಕೆ 'ಅಪಾಯಕರ' ಎಂಬುದಾಗಿ ಕೇಂದ್ರ ಸಚಿವ ಪಿ.ಆರ್. ಮುನ್ಷಿ ತಿರುಗೇಟು ನೀಡಿದ್ದಾರೆ.
ರಾಷ್ಟ್ರಪತಿ ಎಂಬ ಪರಮೋಚ್ಛ ಹುದ್ದೆಯನ್ನು 'ಕಳಂಕಿತೆ'(ಆರೋಪಗಳಿಂದ) ಪಡೆಯುವಂತಾದರೆ ಪರಿಣಾಮ ಊಹಿಸಲಸಾಧ್ಯ, ಆದ್ದರಿಂದ ಕಾಂಗ್ರೆಸ್- ಯುಪಿಎ ಆಕೆಯನ್ನು ಕೈಬಿಟ್ಟು ಬೈರೋನ್ ಸಿಂಗ್ ಶೆಖಾವತ್‌ರನ್ನು ಬೆಂಬಲಿಸಬೇಕೆಂದು ಅಡ್ವಾಣಿ ವಿನಂತಿಸಿದ್ದರು.
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಡ್ವಾಣಿ ನೀಡಿರುವ ಈ ಅಭಿಪ್ರಾಯ ಇದೀಗ ತೀವ್ರ ವಾಗ್ಯುದ್ಧಕ್ಕೆ ಗ್ರಾಸವಾಗುತ್ತಿದೆ. ಅಡ್ವಾಣಿಯ ಹೇಳಿಕೆಗೆ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ಪ್ರಬಲ ಪ್ರತಿಕ್ರಿಯೆ ನೀಡಿದ್ದಾರೆ.
ಅಡ್ವಾಣಿ ಸಂಸದೀಯ ನಡವಳಿಕೆಯನ್ನು ಮೀರುತ್ತಿದ್ದಾರೆ. ಶೆಖಾವತ್ ಅವರನ್ನು ಗೆಲ್ಲಿಸಲು ಅಡ್ವಾಣಿಯವರು ಕಾಂಗ್ರೆಸ್ ಎಡರಂಗ ಒಕ್ಕೂಟ ಯುಪಿಎಯ ಸಂಸದರನ್ನು ಗೌಪ್ಯವಾಗಿ ಸೆಳೆಯುವ ಯತ್ನದಲ್ಲಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮುನ್ಷಿ ಚುನಾವಣಾ ಆಯೋಗದಲ್ಲಿ ವಿನಂತಿಸಿದ್ದಾರೆ.
ಪ್ರತಿಭಾ ಪಾಟೀಲ್ ಅವರ ಸೋದರ ಕೊಲೆ ಕೃತ್ಯದ ಆರೋಪ ಹೊಂದಿರುವುದು, ಅವರ ಕುಟುಂಬದವರ ಬ್ಯಾಂಕ್ ಅವ್ಯವಹಾರ ಆರೋಪಗಳು ಅಡ್ವಾಣಿಯ ಹೇಳಿಕೆಗೆ ಕಾರಣವಾಗಿತ್ತು.
|