ಸತತ ವರ್ಷಧಾರೆಗೆ ತತ್ತರಿಸಿ ಹೋಗಿದ್ದ ಮುಂಬೈ ಮಹಾನಗರಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಕಳೆದ 36ಗಂಟೆಗಳ ಅವಧಿಯಲ್ಲಿ ಸಂಭವಿಸಿದ ವಿವಿಧ ದುರ್ಘಟನೆಗಳಲ್ಲಿ 45 ಮಂದಿ ಸಾವನ್ನಪ್ಪಿದ್ದಾರೆ.
ಮುಂಬೈ,ಕೊಂಕಣ ಪ್ರದೇಶ ಮತ್ತು ಇತರ ಪ್ರದೇಶಗಳಲ್ಲಿ ಮಳೆ ಇಳಿಮುಖವಾಗಿದೆ.ಪುರ್ನವಸತಿ ಇಲಾಖೆಯ ಪ್ರಕಾರ ಅಮರಾವತಿ ಜಿಲ್ಲೆಯ ದರಿಯಾಪುರದಲ್ಲಿ ಹಠಾತ್ ನೆರೆಗೆ 30ಮಂದಿ ಸಿಕ್ಕಿ ಹಾಕಿಕೊಂಡಿದ್ದಾರೆ.ಹೆಲಿಕ್ಯಾಪ್ಟರ್ ಅನ್ನು ಕೂಡ ಪ್ರತಿಕೂಲ ಹವಾಮಾನದಿಂದಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ.
ಮಳೆ,ಪ್ರವಾಹಕ್ಕೆ ಸಿಕ್ಕಿ ಹಾಕಿಕೊಂಡಿದ್ದ ಸುಮಾರು 4,200 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ನವಿ ಮುಂಬಾ ಮತ್ತು ಥಾಣೆ ಪ್ರದೇಶಗಳಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಸುಮಾರು 1,200 ಮಂದಿಯನ್ನು ತೆರವುಗೊಳಿಸಲಾಗಿದೆ.
ಕೊಂಕಣ ಪ್ರದೇಶದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ಕೈಗೊಳ್ಳಲು ರಾಷ್ಟ್ರೀಯ ದುರಂತ ನಿರ್ವಹಣೆ ಪಡೆಯನ್ನು ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತುರ್ಭೆ ಪೊಲೀಸ್ ಠಾಣೆಯೊಳಗೆ ಪ್ರವಾಹದ ನೀರು ನುಗ್ಗಿದ್ದರಿಂದ ಪೊಲೀಸ್ ಶಸ್ತ್ರಾಸ್ತ್ರಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕಾಯಿತು.ಆದರೆ ಮುಂದಿನ 24 ಗಂಟೆಗಳಲ್ಲಿ ಮತ್ತೆ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
|