ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರತವಾಗಿರುವ ಉಗ್ರಗಾಮಿ ಸಂಘಟನೆಗಳು ಭದ್ರತಾ ಮತ್ತು ಕಾವಲು ಪಡೆಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟಕಗಳನ್ನು ಸಿಡಿಸಲು ಸೆಲ್ ಫೋನ್‌ಗಳನ್ನು ಬಳಸಿಕೊಳ್ಳುತ್ತಿವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳಲ್ಲಿ ಪೋಲಿಸರು ಭಾರೀ ಪ್ರಮಾಣದಲ್ಲಿ ಉಗ್ರರ ಮೊಬೈಲ್ ಫೋನ್‌ಗಳನ್ನು ಮತ್ತು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರರು ಐಇಡಿ ಸ್ಫೋಟಕಗಳನ್ನು ಸ್ಫೋಟಿಸಲು ಬಳಸಿಕೊಳ್ಳುತ್ತಿದ್ದಾರೆ. ಈ ಸೆಲ್ ಫೋನ್‌ಗಳ ಬಳಕೆಯಿಂದಾಗಿ ಸುರಕ್ಷಿತವಾಗಿ ಸ್ಫೋಟಿಸಿ ಪರಾರಿಯಾಗುತ್ತಿದ್ದಾರೆ ಎಂದು ಉತ್ತರ ಕಾಶ್ಮೀರದ ಉಪ ಪೋಲಿಸ್ ಮಹಾನಿರ್ದೇಶಕ ಬಿ ಶ್ರೀನಿವಾಸ ಹೇಳಿದ್ದಾರೆ.
ಸೇಲ್ ಫೋನ್‌ಗಳಲ್ಲಿ ಅಳವಡಿಸಲಾಗಿರುವ ವಿಶೇಷವಾದ ಕೋಡ್ ಹಾಗೂ ಜೋಡಿಸಲ್ಪಟ್ಟ ಐಇಡಿಯಿಂದ ಜಗತ್ತಿನ ಯಾವುದೇ ಭಾಗದಲ್ಲಿದ್ದುಕೊಂಡು ಕೇವಲ ನಂಬರ್‌ಗಳನ್ನು ಡೈಯಲ್ ಮಾಡುವ ಮೂಲಕ ಸ್ಫೋಟಕಗಳನ್ನು ಸ್ಫೋಟಿಸಬಹುದು ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮೊಬೈಲ್ ಫೋನ್‌ಗಳನ್ನು ಐಇಡಿಗೋಸ್ಕರ ಬಳಸುವ ಪ್ರಮಾಣ ಹೆಚ್ಚಳವಾಗಿದೆ. ಈ ತಂತ್ರ ಅತ್ಯಂತ ನಿಖರವಾಗಿದ್ದು, ಮಾರಣಾಂತಿಕವೂ ಆಗಿದೆ ಎಂಬುದು ಸೇನಾ ಅಧಿಕಾರಿಯೊಬ್ಬರ ನಿಲುವು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
|