ನವದೆಹಲಿಯಲ್ಲಿಂದು ಭಾರತ ಮತ್ತು ಪಾಕಿಸ್ತಾನ ಗೃಹಕಾರ್ಯದರ್ಶಿಗಳ ಹಂತದ ಮಾತುಕತೆ ಆಂಭವಾಗಿದೆ. ಈ ಸಂದರ್ಭದಲ್ಲಿ ಭಯೋತ್ಪಾದನೆ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ತಡೆಗಟ್ಟುವ ವಿಷಯ ಪ್ರಮುಖವಾಗಿ ಚರ್ಚೆಗೊಳಪಡಲಿದೆ.
ಹನ್ನೊಂದು ಸದಸ್ಯರ ಪಾಕಿಸ್ತಾನ ನಿಯೋಗದ ನೇತೃತ್ವವನ್ನು ಪಾಕ್ ಗೃಹ ಕಾರ್ಯದರ್ಶಿ ಸೈಯದ್ ಕಮಲ್ ಷಾ ವಹಿಸಿದ್ದರೆ, ಭಾರತೀಯ ತಂಡದ ನೇತೃತ್ವವನ್ನು ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ ಗುಪ್ತಾ ವಹಿಸಿದ್ದಾರೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಮಾತುಕತೆಯಲ್ಲಿ ಗಡಿಯಾಚೆ ನಡೆಯುತ್ತಿರುವ ಭಯೋತ್ಪಾದನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ, ಆ ಕುರಿತು ಪಾಕಿಸ್ತಾನಕ್ಕೆ ಮನವರಿಕೆ ಮಾಡಿಕೊಡಲಿದೆ.
ಅಲ್ಲದೇ ಪಾಕಿಸ್ತಾನ ತನ್ನ ನೆಲದಿಂದ ಭಯೋತ್ಪಾದನಾ ಮೂಲಸೌಕರ್ಯವನ್ನು ನಾಶಪಡಿಸುವಂತೆ ಭರವಸೆಯನ್ನು ಕೇಳಲಿದೆ.
ನಮ್ಮ ಉದ್ದೇಶಗಳು ಒಳ್ಳೆಯದಾಗಿವೆ. ನಾವು ಯಾವಾಗ ಭೇಟಿಯಾಗುತ್ತವೆಯೋ ಆಗ ಸಕಾರಾತ್ಮಕ ಪರಿಣಾಮವನ್ನು ಕಂಡಿದ್ದೇವೆ ಎಂದು ಪಾಕಿಸ್ತಾನದ ಗೃಹ ಕಾರ್ಯದರ್ಶಿ ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾ ಹೇಳಿದರು.
ಸಮಸ್ಯೆಗಳ ಕುರಿತು ಚರ್ಚಿಸಲು ನಾವು ಸಮರ್ಥರಾಗಿದ್ದು, ಅವುಗಳನ್ನು ಅಂತಿಮ ಹಂತಕ್ಕೆ ಕೊಂಡೊಯ್ಯಲಾಗುವುದು. ಅಲ್ಲದೇ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಸಕಾರಾತ್ಮಕ ಪರಿಣಾಮವನ್ನು ನಿರೀಕ್ಷಿಸುತ್ತೇವೆ ಎಂದು ಷಾ ಹೇಳಿದರು.
ಈ ಅಭಿಪ್ರಾಯಗಳನ್ನೆ ಭಾರತೀಯ ಗೃಹ ಕಾರ್ಯದರ್ಶಿ ಮುಧುಕರ ಗುಪ್ತಾ ಅವರು ಕೂಡಾ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
|