ಅಕ್ರಮ ಆಸ್ತಿ ಗಳಿಕೆ ಆಪಾದನೆಯ ಹಿನ್ನಲೆಯಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರಿಗೆ ಸೇರಿದ ನಾಲ್ಕು ಪ್ರತ್ಯೇಕ ಮನೆಗಳ ಮೇಲೆ ಏಕಕಾಲಕ್ಕೆ ವಿಶೇಷ ವಿಚಕ್ಷಣಾ ಘಟಕ (ಎಸ್‌ವಿಯು) ಪಾಟ್ನಾದಲ್ಲಿ ಶುಕ್ರವಾರ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ದಾಳಿ ಮಾಡಲ್ಪಟ್ಟ ಮನೆಗಳು ಸಣ್ಣ ನಿರಾವರಿ ಇಲಾಖೆ ಕಾರ್ಯದರ್ಶಿ ಎಸ್ ಎಸ್ ವರ್ಮಾ ಅವರಿಗೆ ಸೇರಿವೆ. ಎಸ್‌ವಿಯು ತಂಡ ವರ್ಮಾ ಅವರಿಗೆ ಸೇರಿದ ಪಾಟ್ನಾದ ರುಕನಪುರ್ ಮತ್ತು ದಾಲದಲಿ ಹಾಗೂ ಲಕ್ನೊ, ಕಟಿಹಾರ್‌ದಲ್ಲಿನ ಆಸ್ತಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡುತ್ತಿದೆ ಎಂದು ವಿಶೇಷ ವಿಚಕ್ಷಣಾ ದಳ ಐಜಿ ಎ ಕೆ ಉಪಾಧ್ಯಾಯ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ವರ್ಮಾ ವಿರುದ್ಧ ಡಿಎ ಪ್ರಕಣವನ್ನು ದಾಖಲಿಸಿಕೊಳ್ಳಲಾಗಿದೆ. ವರ್ಮಾ ಅವರು 1981 ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ವರ್ಮಾ ಸುಮಾರು 68.7 ಲಕ್ಷ ಹೆಚ್ಚು ಆಸ್ತಿಯನ್ನು ಅಕ್ರಮವಾಗಿ ಹೊಂದಿದ್ದಾರೆಂಬ ಆರೋಪವನ್ನು ಹೊತ್ತಿದ್ದಾರೆ. ಇಂದು ಬೆಳಗ್ಗೆ ಪ್ರಾರಂಭವಾಗಿರುವ ದಾಳಿ ಈಗಲೂ ಮುಂದುವರಿದಿದೆ.
|