ಮುಂಬೈಯಲ್ಲಿ ಸಂಭವಿಸಿ ದೇಶವನ್ನೇ ನಡುಗಿಸಿದ ರೈಲುಗಾಡಿ ಸರಣಿ ಸ್ಫೋಟ ದುರಂತಕ್ಕೆ ಇಂದು ಒಂದು ವರ್ಷ. ಉಗ್ರವಾದಿಗಳ ರಕ್ತದಾಹ ತಣಿಯಲು ಅಂದು ಪ್ರಾಣತೆತ್ತ 180 ಮಂದಿಯನ್ನು ದೇಶ ಇನ್ನೂ ಸ್ಮರಿಸುತ್ತದೆ, ಕಣ್ಣಾಲಿಗಳು ನನೆಯುತ್ತವೆ.
ಕಳೆದ ವರ್ಷ ಇದೇ ದಿನ ಸಂಜೆ ಕೇವಲ 10 ನಿಮಿಷಗಳ ಅಂತರದಲ್ಲಿ 7 ಕಡೆ ತುಂಬಿ ಜನರಿಂದ ತುಳುಕುತ್ತಿದ್ದ ರೈಲುಗಾಡಿಗಳಲ್ಲಿ ಸಂಭವಿಸಿದ ಭಾರೀ ಆಸ್ಫೋಟ ಪ್ರಸ್ತುತ ಬೃಹನ್ನಗರವನ್ನಷ್ಟೇ ಅಲ್ಲ, ಸಮಗ್ರ ದೇಶವನ್ನೇ ಬೆಚ್ಚಿಬೀಳಿಸಿತು. ಜನಜೀವನವನ್ನು ಅಸ್ವಸ್ಥಗೊಳಿಸಿತ್ತು.
ಕಳೆದ ವರ್ಷ ಜುಲೈ 11ರ ಸಂಜೆ 6 ಗಂಟೆಗೆ ಈ ಅನಾಹುತ ಸಂಭವಿಸಿತ್ತು. ಅದು ಜನರೆಲ್ಲಾ ರೈಲುಗಳಲ್ಲಿ ಕಿಕ್ಕಿರಿದು ಸೇರುವ ಸಮಯ. ಕಚೇರಿಗಳಿಂದ ಮನೆಯತ್ತ ಧಾವಿಸುವ ದುಡಿಯುವ ವರ್ಗ ಸಂಚರಿಸುವ ರೈಲುಗಾಡಿಗಳಲ್ಲಿರುತ್ತದೆ ಎಂಬುದು ಭಯೋತ್ಪಾದಕರಿಗೆ ಗೊತ್ತಿತ್ತು. ಹಾಗಾಗಿ ಸ್ಫೋಟದ ಸಾವು-ನೋವಿನ ಸಂಖ್ಯೆ ಮಹಾನಗರದ ತಾಳ್ಮೆ ತಪ್ಪುವಂತೆ ಮಾಡಿತ್ತು.
ಆ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ, ಭಯೋತ್ಪಾದಕರ ರಕ್ತಸಿಕ್ತ ಚಟುವಟಿಕೆಗಳು ಪುಂಕಾನುಪುಂಕವಾಗಿ ನಡೆಯುತ್ತಲೇ ಇವೆ, ಮುಂಬೈಯಷ್ಟೇ ಅಲ್ಲ, ದೇಶದ ಇತರ ಪ್ರಮುಖ ಮಹಾನಗರಗಳು, ವಾಣಿಜ್ಯ ನಗರಗಳತ್ ವಿಸ್ತರಿಸಿವೆ ಎಂಬುದು ಕಳವಳಕಾರಿಯಾದರೂ ಸತ್ಯ.
|