ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ, ಭಾರತದಲ್ಲಿನ ವೈಜ್ಞಾನಿಕ ಪ್ರಗತಿಗೆ ಸಲ್ಲಿಸಿದ ಅಸಾಧಾರಣ ಕಾಣಿಕೆಗೆ ಪ್ರತಿಷ್ಟಿತ ಬ್ರಿಟಿಶ್ ಪ್ರಶಸ್ತಿಯಾದ ಕಿಂಗ್ ಚಾರ್ಲ್ಸ್ ಮೆಡಲ್‌ಗೆ ಆಯ್ಕೆ ಮಾಡಲಾಗಿದೆ.
ಜಪಾನಿನ ರಾಷ್ಟ್ರಾಧ್ಯಕ್ಷ ಅಕಿಹಿಟೊರ ನಂತರ ರಾಯಲ್ ಸೊಸೈಟಿ ನೀಡುವ ಈ ಪ್ರಶಸ್ತಿಯ ಗೌರವ ಪಡೆವ ಎರಡನೇ ರಾಷ್ಟ್ರಾಧ್ಯಕ್ಷರಾಗಿದ್ದಾರೆ.
"ಭಾರತದಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಹೂಡಿಕೆ ಮೂಲಭೂತವಾಗಿ ಹೆಚ್ಚಾದಾಗ ರಾಷ್ಟ್ರಾಧ್ಯಕ್ಷ ಕಲಾಂ ದೇಶವನ್ನು ಮುನ್ನಡೆಸಿದ್ದಾರೆ" ಎಂದು ರಾಯಲ್ ಸೊಸೈಟಿಯ ಅಧ್ಯಕ್ಷರಾದ ಮಾರ್ಟಿನ್ ರೀಸ್ ಹೇಳಿದ್ದಾರೆ.
"ಭಾರತ ಅಭಿವೃದ್ಧಿ ಹೊಂದುತ್ತಿರುವ ಸ್ಥಿತಿಯಿಂದ ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಿ ರೂಪುಗೊಳ್ಳಲು ಮಾರ್ಗನಕ್ಷೆಯನ್ನು ಸಿದ್ಧಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ರೀಸ್ ಹೇಳಿದ್ದಾರಲ್ಲದೆ, ಸ್ವತಃ ವಿಜ್ಞಾನಿಯಾಗಿರುವ ಅವರು, ತಮ್ಮ ದೇಶದಲ್ಲಿನ ವೈಜ್ಞಾನಿಕ ಬೆಳವಣಿಗೆಗೆ ಮಹತ್ತರ ಕಾಣಿಕೆ ಸಲ್ಲಿಸಿದ್ದಾರೆ ಎಂದು ನುಡಿದರು.
ಪದಕ ಪ್ರದಾನ ಸಮಾರಂಭವನ್ನು ದೆಹಲಿ ಮತ್ತು ಲಂಡನ್‌ನಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಮಾಜಿ ಪ್ರಧಾನ ಮಂತ್ರಿ ಚಂದ್ರಶೇಖರ್ ನಿಧನರಾದ ಕಾರಣ ಮುಂದೂಡಲಾಗಿದೆ.
ಜುಲೈ 19ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ನಂತರ ಸಮಾರಂಭವನ್ನು ನಡೆಸಲು ಹೊಸ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸೊಸೈಟಿ ತಿಳಿಸಿದೆ.
|