ಸಿಖ್ ಸನ್ಯಾಸಿನಿಯ ಅತ್ಯಾಚಾರ ಹಾಗೂ ಅನುಯಾಯಿ ಹತ್ಯೆ ಆರೋಪಗಳ ಕುರಿತಂತೆ ತನಿಖೆ ನಡೆಸಲು ಸಿಬಿಐ ಇದೀಗ ಸಿಖ್ ಪ್ರತ್ಯೇಕ ಪಂಗಡವಾದ ದೇರಾ ಸಚ್ಚಾ ಸೌದದ ಮುಖಂಡ ಬಾಬಾ ಗುರು ಗರ್ಮೀತ್ ಸಿಂಗ್ ಅವರನ್ನು ಬಂಧಿಸಲು ಸಿದ್ಧತೆ ನಡೆಸುತ್ತಿದೆ.
ದೇರಾ ಮುಖ್ಯಸ್ಥ ಗುರು ಗರ್ಮಿತ್ ರಾಮ್ ರಹೀಂ ಸಿಂಗ್ ಅವರು ಇತ್ತೀಚೆಗಷ್ಟೇ ನ್ಯಾಯಾಲಯ ಆದೇಶದಂತೆ ಪೊಲೀಸ್ ಬಂಧನದಿಂದ ನಿರೀಕ್ಷಣಾ ಜಾಮೀನಿನ್ವಯ ಪಾರಾಗಿದ್ದರು. ಆದರೆ ಇದೀಗ ಸಿಬಿಐ ರಂಗ ಪ್ರವೇಶ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಗರ್ಮೀತ್ ಸಿಂಗ್ ಬಾಬಾ ತನ್ನ ಅನುಯಾಯಿ ರಂಜೀತ್ ಸಿಂಗೇ ಅವರನ್ನು ಗುಂಡಿಕ್ಕಿ ಸಾಯಿಸಿದ ಆರೋಪವನ್ನೆದುರಿಸಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವ ತನಿಖಾ ವರದಿಗಳಂತೆ ಹೊಸ ಕಾರ್ಯಾಚರಣೆ ನಡೆಯುತ್ತಿದ್ದು, ಜುಲೈ 30ರೊಳಗಾಗಿ ಆರೋಪ ಪಟ್ಟಿ ಸಲ್ಲಿಸಬೇಕಿದೆ.
ಗುರು ಗರ್ಮೀತ್ ಸಿಂಗ್ ಸನ್ಯಾಸಿನಿಯನ್ನು ಅತ್ಯಾಚಾರ ಗೈದಿರುವ ಕುರಿತು ಪ್ರಧಾನಮಂತ್ರಿ ಕಾರ್ಯಾಲಯ ತಲುಪಿದ ಅನಾಮಧೇಯ ಪತ್ರದಂತೆ ತನಿಖೆ ನಡೆಯುತ್ತಿದೆ. ಈ ಪತ್ರವನ್ನು ರಂಜಿತ್ ಸಿಂಗ್ ಬರೆದಿರಬಹುದು ಎಂದು ಅನುಮಾನಿಸಿ ಆತನ ಹತ್ಯೆಯನ್ನು ಬಾಬಾ ನಡೆಸಿರುವುದಾಗಿ ಶಂಕಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 7 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇವರಲ್ಲಿ ದೇರಾ ವ್ಯವಸ್ಥಾಪಕರ, ಬಾಬಾನ ಅಂಗರಕ್ಷಕ, ಪೋಲೀಸ್ ಸಿಬ್ಬಂದಿ, ಖಾಸಗಿ ಅಂಗರಕ್ಷಕ ಮುಂತಾದವರಿದ್ದಾರೆ.
ಬಾಬಾ ಈ ಮೊದಲು ರಂಜಿತ್ ಸಿಂಗ್‌ನ ಸೋದರಿ ಸಾದ್ವಿ ಸಂಜೀವನಾರನ್ನು ಮೂರುವರ್ಷಗಳ ಕಾಲ ಬಲಾತ್ಕರಿಸಿದ್ದಲ್ಲದೆ, ಇತರ ಸನ್ಯಾಸಿನಿಗಳನ್ನೂ ಬಳಸಿಕೊಂಡಿರುವುದಾಗಿ ಆರೋಪಗಳಿವೆ. ಇತರ ಮೂರು ಮಂದಿ ಸನ್ಯಾಸಿನಿಯರೂ ಅತ್ಯಾಚಾರಗೈದಿರುವುದಾಗಿ ದೂರು ನೀಡಿರುವರೆಂದು ಹೇಳಲಾಗಿದೆ.
|