ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಅಭ್ಯರ್ಥಿ ಪ್ರತಿಭಾ ಪಾಟೀಲ್ ಹಾಗೂ ಬಿಜೆಪಿ ಸಹಪಕ್ಷಗಳ ಎನ್‌ಡಿಎ ಒಕ್ಕೂಟ ಬೆಂಬಲಿತ ಅಭ್ಯರ್ಥಿ ಬೈರೋನ್‌ಸಿಂಗ್ ಶೆಖಾವತ್ ಇಬ್ಬರನ್ನೂ ಬೆಂಬಲಿಸದಿರಲು ತೃತೀಯರಂಗವಾದ ರಾಷ್ಟ್ರೀಯ ಪ್ರಗತಿಪರ ಐಕ್ಯರಂಗ (ಯುಎನ್‌ಪಿಎ) ಸಬೆ ಇಂದಿಲ್ಲಿ ನಿರ್ಧರಿಸಿದೆ.
ಜುಲೈ 19ರಂದು ಮತದಾನ ಜರುಗಲಿರುವ ರಾಷ್ಟ್ರಪತಿ ಚುನಾವಣೆ ಹಾಗೂ ಆ ಬಳಿಕ ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆ ಕುರಿತಾಗಿ ತಮ್ಮ ನಿಲುವನ್ನು ನಿರ್ಧರಿಸಲು ಯುಎನ್‌ಪಿಎ ಮುಖಂಡರು ಶನಿವಾರ ನವದೆಹಲಿಯಲ್ಲಿ ಸಭೆ ಸೇರಿ ಈ ನಿರ್ಧಾರಕೈಗೊಂಡಿದ್ದಾರೆ.
ಯುಪಿಎ ಅಭ್ಯರ್ಥಿಯಾಗಿರುವ ಪ್ರತಿಭಾ ಪಾಟೀಲ್ ಅವರನ್ನು ಬೆಂಲಿಸುವ ಪ್ರಶ್ನೆಯೇ ಇಲ್ಲ. ಅಂತೆಯೇ ಪಕ್ಷೇತರ ಅಭ್ಯರ್ಥಿಯಾಗಿರುವ ಬಿಜೆಪಿ ಮುಖಂಡ ಉಪರಾಷ್ಟ್ರ್ರಪತಿ ಬೈರೋನ್ ಸಿಂಗ್ ಶೆಖಾವತ್ ಅವರನ್ನೂ ಬೆಂಬವಲಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯ ಬಳಿಕ ಮುಖಂಡರು ತಿಳಿಸಿದ್ದಾರೆ.
ಎನ್‌ಡಿಎ ಒಕ್ಕೂಟವು ಶೆಖಾವತ್ ಅವರನ್ನು ಬೆಂಬಲಿಸುವಂತೆ ಯುಎನ್‌ಪಿಎ ಮುಖಂಡರ ಮನವೊಲಿಸಲು ಪ್ರಯತ್ನಿಸುತ್ತಿರುವಂತೆಯೇ ಪ್ರಕರಣ ಹೊಸ ತಿರುವು ಪಡೆದಿದೆ. ತೃತೀಯರಂಗದ ಇಂದಿನ ನಿರ್ಧಾರದಿಂದ ಶೆಖಾವತ್ ಅವರ ಗೆಲುವಿನ ಪ್ರಯತ್ನ ಮತ್ತಷ್ಟು ಕಳೆಗುಂದಿದೆ.
ಸಭೆಯಲ್ಲಿ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ, ತೆಲುಗು ದೇಶಂ ಮುಖಂಡ ಚಂದ್ರಬಾಬು ನಾಯ್ಡು, ಸಮಾಜವಾದಿ ಪಕ್ಷ ನಾಯಕ ಮುಲಾಯಂ ಸಿಂಗ್ ಯಾದವ್, ಅಮರ್ ಸಿಂಗ್ , ಬ್ರಿಂದಾಬನ್ ಗೋಸ್ವಾಮಿ ಮಹಂತಾದವರು ಉಪಸ್ಥಿತರಿದ್ದರು.
|