ದೇಶವನ್ನಾಳುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಭಯೋತ್ಪಾದನೆಯ ಬಗ್ಗೆ ಮೃದುಧೋರಣೆ ಹೊಂದಿದೆ, ಇದರಿಂದ ದೇಶದಲ್ಲಿನ ಆಂತರಿಕ ಭದ್ರತೆಗೆ ಗಂಭೀರ ಧಕ್ಕೆ ಉಂಟಾಗಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆಯನ್ನು ಅಂತ್ಯಗೊಳಿಸಲಿಕ್ಕೆ ಉಗ್ರಕ್ರಮ ಕೈಗೊಂಡಲ್ಲಿ ಮುಸ್ಲಿಮ್ ಮತಗಳು ಕಾಂಗ್ರೆಸ್ ನಿಂದ ವಲಸೆ ಹೊಗಬಹುದೆಂಬ ಹೆದರಿಕೆಯಿಂದ ಯುಪಿಎ ಸರಕಾರ ಮೃದು ಧೋರಣೆ ತಾಳಿದೆ. ಆದರೆ ವಾಸ್ತವದಲ್ಲಿ ಇಡೀ ಮುಸ್ಲಿಮ್ ಸಮುದಾಯ ಭಯೋತ್ಪಾದನೆಯ ಪರವಾಗಿಲ್ಲ ಹಾಗೂ ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಯುಪಿಎ ಸರಕಾರ ಭಯೋತ್ಪಾದನೆ ಬಗ್ಗೆ ತಾಳಿರುವ ಮೃದು ಧೋರಣೆಯು ಸಮಾಜದ ಎಲ್ಲ ವರ್ಗಗಳ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂಬುವುದನ್ನು ಮುಸ್ಲಿಮ್ ಬಾಂಧವರು ಅರ್ಥಮಾಡಿಕೊಳ್ಳಬೇಕೆಂದು ಕೋರುತ್ತೇನೆ ಎಂದು ಅವರು ಹೇಳಿದರು.
ಕಳೆದ ವರ್ಷ ಸಂಭವಿಸಿದ ಮುಂಬಯಿ ಸರಣಿ ರೈಲು ಸ್ಫೋಟ ನಂತರ, ಅದಕ್ಕೆ ಕಾರಣರಾದವರ ಹೆಸರನ್ನು ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರು ಬಹಿರಂಗಪಡಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೆ ಆ ಕಾರ್ಯ ಮಾಡಿಲ್ಲ ಎಂದು ರಾಜನಾಥ್ ಟೀಕಿಸಿದರು.
|