ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಭೂಗತ ಪಾತಕಿ ಅಬು ಸಲೇಂ ಅವರ ಸಂಗಾತಿ ಮೋನಿಕಾ ಬೇಡಿ ಅವರನ್ನು ಭೂಪಾಲ್ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿದೆ.
ಮೋನಿಕಾ ಬೇಡಿ ಸಲ್ಲಿಸಿದ್ದ ಮೇಲ್ಮನವಿ ಮೇರೆಗೆ ಸುಪ್ರೀಂ ಕೋರ್ಟ್ ಜುಲೈ 10 ರಂದು ಮಧ್ಯ ಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.
ನಕಲಿ ಪಾಸ್‌ಪೋರ್ಟ್ ಪ್ರಕರಣದ ವಿಚಾರಣೆಯನ್ನು ಭೂಪಾಲ್ ನ್ಯಾಯಾಲಯದಿಂದ ದೆಹಲಿಗೆ ಅಥವಾ ಮುಂಬಯಿಗೆ ಸ್ಥಳಾಂತರಿಸುವಂತೆ ಭೂಗತದೊರೆ ಸಂಗಾತಿ ಮೋನಿಕಾ ಬೇಡಿ ಅವರು ಕೇಳಿದ್ದರು.
ಭೂಪಾಲ್ ವಿಚಾರಣೆಯಲ್ಲಿ ತಾವು ಸಮರ್ಪಕ ನ್ಯಾಯ ಪಡೆದುಕೊಳ್ಳುವುದಿಲ್ಲ ಎಂದು ಮಾಜಿ ಬಾಲಿವುಡ್ ನಟಿ ಪಟ್ಟು ಹಿಡಿದ ನಂತರ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರು ಮಧ್ಯ ಪ್ರದೇಶ ಸರಕಾರದಿಂದ ಪ್ರತಿಕ್ರಿಯೆ ಪಡೆದುಕೊಂಡಿದ್ದರು.
ಮುಂದಿನ ಎರಡು ತಿಂಗಳೊಳಗಾಗಿ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಅಪೆಕ್ಸ್ ನ್ಯಾಯಾಲಯವು ನಿರ್ದೇಶಿಸಿದ್ದು, ಈ ವಿಚಾರಣೆ ನ್ಯಾಯಾಲಯವನ್ನು ತಪ್ಪು ಹಾದಿಗೆ ಎಳೆಯುತ್ತದೆ ಹಾಗೂ ಮೊಕದ್ದಮೆಯನ್ನು ನ್ಯಾಯಬದ್ಧವಾಗಿ ವಿಚಾರಿಸಲು ಸಾಧ್ಯವಾಗುವುದಿಲ್ಲ ಎಂದು ಬೇಡಿ ಮೊದಲಿನಿಂದಲೂ ಹೇಳುತ್ತಾ ಬಂದಿದ್ದರು ಎನ್ನಲಾಗಿದೆ.
ತಮ್ಮ ವಿರುದ್ಧ ಮೊಕದ್ದಮೆ ಹೂಡಲು ಸಾಕ್ಷಿಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಹೇಳಿರುವ ಬೇಡಿ, ಪೋರ್ಚುಗಲ್‌ನಿಂದ ಹಸ್ತಾಂತರಿಸಿದ ಸಂದರ್ಭದಲ್ಲಿನ ನಿಬಂಧನೆಗಳ ಪ್ರಕಾರ ಪ್ರತ್ಯೇಕ ವಿಚಾರಣೆ ಮಾಡುವುದನ್ನು ಅವರು ನಿರಾಕರಿಸಿದ್ದರು.
ಫೌಜಿಯಾ ಎಂಬ ಹೆಸರಿನಲ್ಲಿ ನಕಲಿ ದಾಖಲೆ ಪತ್ರಗಳನ್ನು ತೋರಿಸಿ ಪಾಸ್‌ಪೋರ್ಟ್ ಹೊಂದಿದ್ದ ಆರೋಪದ ಮೇಲೆ ಮಧ್ಯ ಪ್ರದೇಶದ ಪೋಲಿಸರು ಬೇಡಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದರು.
|