ಇಂದು ಜರುಗಿದ ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ತೃತೀಯರಂಗವಾದ ರಾಷ್ಟ್ರೀಯ ಪ್ರಗತಿಪರ ಐಕ್ಯರಂಗ(ಯುಎನ್‌ಪಿಎ)ದ ಅಂಗಪಕ್ಷ ಎಐಎಡಿಎಂಕೆಯು ಬಿಜೆಪಿನೇತೃತ್ವದ ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಭೈರೋನ್ ಸಿಂಗ್ ಶೆಖಾವತ್‌ರನ್ನು ಬೆಂಬಲಿಸಿರುವುದು ಕಾಂಗ್ರೆಸ್ ಎಡರಂಗವಿರುವ ಯುಪಿಎ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮಧ್ಯೆ ಹೊಸ ಬೆಳವಣಿಗೆಗಳು ಅಭ್ಯರ್ಥಿ ಪ್ರತಿಭಾ ಪಾಟೀಲರ ಗೆಲುವಿಗೆ ಬಾಧಕವಲ್ಲ, ಅವರು ಐತಿಹಾಸಿಕ ದಾಖಲೆ ಮತಗಳಿಕೆಯೊಂದಿಗೆ ಗೆಲುವು ಸಾಧಿಸುವರು ಎಂಬುದಾಗಿ ಯುಪಿಎ ತಿಳಿಸಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆಯು ಇಂದು ಶೆಖಾವತ್ ಪರವಾಗಿ ಮತಚಲಾಯಿಸಲು ನಿರ್ಧರಿಸಿರುವುದನ್ನು ಟೀಕಿಸಿರುವ ಕಾಂಗ್ರೆಸ್ ಹಾಗೂ ಎಡರಂಗ ಸಂಘಟನೆಗಳು ತೃತೀಯ ರಂಗ ಇಬ್ಭಾಗವಾಗಿರುವ ಸೂಚನೆ ಇದು ಎಂದಿದ್ದಾರೆ.
ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲ ವಾರ್ತಾಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ಎರಡು ತಿಂಗಳು ಕೂಡ ಪ್ರಾಯ ಪೂರೈಸದ ತೃತೀಯ ರಂಗ ಇಬ್ಬಾಗವಾಗಿದೆ, ಎಐಎಡಿಎಂಕೆ ನಿರ್ಧಾರ ಇದನ್ನು ಬಹಿರಂಗ ಪಡಿಸಿದೆ ಎಂದಿದ್ದಾರೆ.
ಯುಪಿಎ ಅಂಗಪಕ್ಷವಾಗಿರುವ ಎಡರಂಗ ಸಂಘಟನೆಗಗಳು ಇದೇ ಹೇಳಿಕೆಯನ್ನು ನೀಡಿದ್ದು, ಸಿಪಿಐಯ ಗುಗುದಾಸ್ ದಾಸ್‌ಗುಪ್ತ ನೀಡಿರುವ ಹೇಳಿಕೆಯಂತೆ ತೃತಿಯ ರಂಗ ಒಡೆದಿದೆ ಎಂದು ತಮ್ಮ ಅಭಿಪ್ರಾಯದೊಂದಿಗೆ ಟೀಕೆ ವ್ಯಕ್ತಪಡಿಸಿದ್ದಾರೆ.
|