ಭಾರತದಲ್ಲಿಂದು ಐತಿಹಾಸಿಕ ಕ್ಷಣಕ್ಕಾಗಿ ಸನ್ನಿವೇಶಗಳು ಪೂರ್ಣಗೊಂಡಿದ್ದು, ಆ ಮುಹೂರ್ತಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಭಾರತೀಯರು ವಿಶೇಷವಾಗಿ ಮಹಿಳೆಯರು ರಾಷ್ಟ್ರಪತಿ ಆಯ್ಕೆಯ ಫಲಿತಾಂಶಕ್ಕಾಗಿ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಪ್ರಥಮ ಮಹಿಳೆ ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗುವ ಲಕ್ಷಣಗಳಿವೆ.
ಜುಲೈ 19ರಂದು ಮತದಾನ ನಡೆದ ಹಿನ್ನೆಲೆಯಲ್ಲಿ ಇಂದು , ಚುನಾವಣಾ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಇದೀಗ ಮತಎಣಿಕೆ ಆರಂಭವಾಗಿದೆ. ಸ್ಪರ್ಧಾಕಣದಲ್ಲಿ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಹಾಗೂ ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬೈರೋನ್ ಸಿಂಗ್ ಶೆಕಾವತ್ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.
ಪ್ರತಿಭಾಪಾಟೀಲ್ ಅವರಿಗೆ ಬೆಂಬಲ ನೀಡಿದ ಯುಪಿಎ ಒಕ್ಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎಡರಂಗಗಳು ಸುಮಾರಕು 2.5 ಲಕ್ಷ ಮತಗಳ ಬಹುಮತದಿಂದ ಗೆಲುವು ಸಾಧಿಸುವ ನಿರೀಕ್ಷೆ ಇರಿಸಿದ್ದಾರೆ. ಶಿವಸೇನೆಯಂತಹ ಕಠೋರ ವಾದಿಗಳೂ ಬೆಂಬಲಿಸಿರುವುದರಿಂದ ಇದು ಅಸಾಧ್ಯವಲ್ಲ.
ಈ ಮಧ್ಯೆ, ಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿರುವ ಪ್ರತಿಭಾ ಪಾಟೀಲ್ ಅವರ ಗೆಲುವಿಗಾಗಿ ಯುಪಿಎ ಸಿದ್ಧವಾಗಿದೆ. ಎನ್‌ಡಿಎ ಪ್ರಮುಖರೂ ನಿರೀಕ್ಷಿತ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕೆಲವೇ ತಾಸುಗಳಲ್ಲಿ ಫಲಿತಾಂಶ ಹೊರಬರಲಿದೆ.
|