ಮುಂಬೈಸರಣಿ ಬಾಂಬ್ ಸ್ಫೋಟ ಹತ್ಯಾಕಾಂಡದ ಆರೋಪಿಗದಳ ವಿಚಾರಣೆ ನಡೆಸುತ್ತಿರುವ ವಿಶೇಷ ಟಾಡಾ ನ್ಯಾಯಾಲಯವು ಇಂದು ಮತ್ತೆ ಮೂರು ಮಂದಿಗೆ ಮರಣ ದಂಡನೆ ವಿಧಿಸಿದೆ. ಒಬ್ಬನಿಗೆ ಜೀವಾವಧಿ ಶಿಕ್ಷೆಗೆ ತೀರ್ಪಾಗಿದೆ.
ವಿಶೇಷ ಟಾಡಾ ನ್ಯಾಯಾಲಯದ ನ್ಯಾಯಾಧೀಶ ಪಿ.ಡಿ.ಕೋಡೆ ಅವರು ಇಂದು ನೀಡಿದ ತೀರ್ಪೂ ಸೇರಿದಂತೆ ಈ ವರೆಗೆ ಮರಣದಂಡನೆ ಶಿಕ್ಷೆಗೀಡಾದ ಸರಣಿ ಸ್ಫೋಟ ಪ್ರಕರಣದ ಆರೋಪಿಗಳ ಸಂಖ್ಯೆ 10ಕ್ಕೇರಿದೆ.
ಸಂಟ್ರಲ್ ಮುಂಬೈಯ ಮೀನುಗಾರರ ಕಾಲೊನಿಯಲ್ಲಿ ಗ್ರೇನೇಡ್ ಸಿಡಿಸಿ ಸಾವುನೋವಿಗೆ ಕಾರಣರಾದ ಝಾಕೀರ್ ಹುಸೇನ್ ಶೇಕ್, ಫಿರೋಝ್ ಮಲಿಕ್, ಅಬ್ದುಲ್ ಅಕ್ತರ್ ಖಾನ್ ಇವರಿಗೆ ಮರಣ ದಂಡನೆ ಶಿಕ್ಷೆ ನೀಡಲಾಗಿದೆ.
ಈ ಮೂವರು ಕುಖ್ಯಾತರು 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕಾಗಿ ಸಂಚಿನಲ್ಲಿ ದೀರ್ಘಕಾಲದ ಭಾಗೀದಾರರಾಗಿದ್ದರು. ತಲೆಮರೆಸಿಕೊಂಡಿರುವ ಆರೋಪಿ ಟೈಗರ್ ಮೆಮನ್ ಕಳುಹಿಸಿದ ಶಸ್ತ್ರಾಸ್ತ್ರವನ್ನು ಪಡೆದು, ನಿಗದಿತ ಜಾಗದಲ್ಲಿ ವಿನ್ಯಾಸಗೊಳಿಸಿದ್ದರು.
ಜೀವಾವಧಿ ಶಿಕ್ಷೆಗೀಡಾಗಿರುವ ಆರೋಪಿಯನ್ನು ಮೊಯೀನ್ ಖುರೇಶಿ ಎಂದು ಗುರುತಿಸಲಾಗಿದೆ. ಈತನೂ ಗ್ರೇನೇಡ್ ಎಸೆತಕ್ಕಾಗಿ ಶಿಕ್ಷೆಗೊಳಗಾಗಿದ್ದಾನೆ.
|