ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಪ್ರಪ್ರಥಮ ಮಹಿಳಾ ಪ್ರಥಮಪ್ರಜೆ (ರಾಷ್ಟ್ರಪತಿ)ಯಾಗಿ ಪ್ರತಿಭಾ ಪಾಟೀಲ್ ಇಂದು ಪ್ರತಿಜ್ಞಾ ವಿಧಿಯೊಂದಿಗೆ ಅಧಿಕಾರ ಸ್ವೀಕರಿಸಿದರು.
ರಾಷ್ಟ್ರಪತಿಯಾಗಿ ಅಧಿಕಾರ ವಹಿಸುವ ವೇಳೆ ಪ್ರತಿಭಾ ಪಾಟೀಲರಿಗೆ ದೇಶದ ಸರ್ವೋಚ್ಛ ನ್ಯಾಯಾಲಯದ ಪ್ರಧಾನ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಪಾಲ್ಗೊಂಡಿದ್ದರು. ಅವರಲ್ಲಿ ಪ್ರಮುಖರಾಗಿ ನಿಕಟಪೂರ್ವ ರಾಷ್ಟ್ರಪತಿ ಡಾ. ಅವುಲ್ ಪಕೀರ್ ಜಲಾಲುದ್ದೀನ್ ಅಬ್ದುಲ್ ಕಲಾಂ , ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಲೋಕಸಭಾಧ್ಯಕ್ಷ ಸೋಮನಾಥ್ ಚಾಟರ್ಜಿ, ರಾಜ್ಯಸಭಾ ಉಪಾಧ್ಯಕ್ಷ ಕೆ. ರೆಹ್ಮಾನ್ ಖಾನ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಸೋನಿಯಾ ಗಾಂಧಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯಗಳ ರಾಜ್ಯಪಾಲರು,ಕೇಂದ್ರ ಸಂಪುಟದ ಮಂತ್ರಿಗಳು, ಅಧಿಕಾರಿವರಿಷ್ಠರು, ರಾಜ್ಯಗಳ ಚುನಾಯಿತ ಪ್ರಮುಖರು ಉಪಸ್ಥಿತರಿದ್ದರು.
ರಾಷ್ಟ್ರದ ಸರ್ವೋಚ್ಛ ಪದವಿಯಾದ ರಾಷ್ಟ್ರಪತಿಪದವಿಯಲ್ಲಿ ಅಧಿಕಾರ ವಹಿಸುತ್ತಿರುವ ಪ್ರತಿಭಾ ಪಾಟೀಲ್ ಅವರಿಗೆ ಗೌರವ ಸೂಚಿಸಿ 21 ಸುತ್ತು ಕುಶಾಲು ತೋಪು ಸಿಡಿಸಲಾಯಿತು. ರಕ್ಷಣಾ ವ್ಯೂಹದ ಪ್ರಧಾನ ದಂಡನಾಯಕರೂ ಆಗಿರುವರಿಂದ ಆ ವಿಭಾಗಳ ಗೌರವ ವಂದನೆಯನ್ನೂ ನೀಡಲಾಯಿತು.
ದೇಶದ 13ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಪ್ರತಿಭಾ ಪಾಟೀಲ್ ಅವರು ಇಂಗ್ಲೀಷ್‌ನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
|