ಕೇರಳದ ವಿಶ್ವವಿಖ್ಯಾತ ಶ್ರೀಕೃಷ್ಣ ದೇವಸ್ಥಾನವಾದ ತೃಶ್ಶೂರು ಜಿಲ್ಲೆಯ ಗುರುವಾಯೂರು ಶ್ರೀಕ್ಷೇತ್ರದಲ್ಲಿ ಇದೇ ಪ್ರಥಮಬಾರಿಗೆ 'ಮಹಿಳಾ ವಸ್ತ್ರಸಂಹಿತೆ' ಬದಲಾಗಿದೆ. 'ಕಡ್ಡಾಯ ಸೀರೆ' ನೀತಿಯನ್ನು 'ಸಲ್ವಾರ್ ಕಮೀಜ್'ಗೆ ಬದಲಿಸಲಾಗಿದೆ.
ಕಾಲಕ್ಕೆ ತಕ್ಕಂತೆ ದೇವಸ್ಥಾನಗಳು ಬದಲಾಗಬೇಕು ಎನ್ನುವವರು, ದೇವಾಲಯಗಳಲ್ಲಿ ಅದರದ್ದಾದ ಶಾಸನ ನೀತಿ ಸಂಹಿತೆ ಇರಲಿ ಎನ್ನುವ ಪರವಿರೋಧ ಹೇಳಿಕೆಗಳ ನಡುವೆಯೇ, ಗುರುವಾಯೂರು ದೇವಳದವರು ವಸ್ತ್ರಸಂಹಿತೆ ಕಾನೂನು ತಿದ್ದುಪಡಿ ಮಾಡಲಿದ್ದಾರೆ.
ಈ ಮೊದಲು ದೇವಸ್ಥಾನ ಪ್ರವೇಶಿಸುವ ಮಹಿಳೆಯರು ಕಡ್ಡಾಯವಾಗಿ ಸೀರೆ ಧರಿಸಿರಬೇಕು ಎಂದು ದೇವಳದ ನೀತಿಸಂಹಿತೆ ಜಾರಿಯಲ್ಲಿತ್ತು. ಇತರ ಉಡುವು ತೊಟ್ಟ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗುತ್ತಿತ್ತು. ಆದರೆ ಇದೀಗ ಮಹಿಳೆಯ ಹಿತಕರ ಉಡುಪು ಎನ್ನಲಾದ ಸಲ್ವಾರ್ ಕಮೀಜ್(ಚೂಡಿದಾರ್)ಗೆ ದೇವಳ ಅನುಮತಿ ನೀಡಿದೆ.
ದೇವಳದವರು ಕಡ್ಡಾಯಸೀರೆ ನೀತಿ ಬದಲಿಸಬೇಕು, ಸೀರೆ ಇದು ತನ್ನ ಅಸ್ತಿತ್ವ ಕಳಕೊಂಡಿದೆ ಎಂಬುದಾಗಿ ಮಹಿಳಾಕೂಗಿಗೆ ಸ್ಪಂದಿಸಿ ಹಳೆಯ ಶಾಸನಕ್ಕೆ ತಿದ್ದುಪಡಿ ತರಲಾಗಿದೆ. ಆದರೆ ಮಹಿಳೆಯರು ಜೀನ್ಸ್, ಅರೆ ಚಡ್ಡಿ, ಸ್ಕರ್ಟ್ ಮುಂತಾದ ಇತರ ಉಡುಪು ಧರಿಸಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಪುರುಷರಿಗೆ ಪಂಚೆ ನಿಗದಿಪಡಿಸಲಾಗಿದ್ದು, ಪ್ಯಾಂಟು, ಉದ್ದ ಚಡ್ಡಿಗೆ ನಿಷೇಧವಿದೆ. ದೇವಳ ಅಧಿಕಾರಿಗಳು ತಿಳಿಸಿರುವಂತೆ ಮಹಿಳಾ ವಸ್ತ್ರ ಸಂಹಿತೆಯಲ್ಲಿ ಹೊಸತನ ತಂದಿರುವುದು ದೇವಾಲಯದಲ್ಲಿನ ಸುಧಾರಣಾ ಕ್ರಮಗಳ ಒಂದಂಶ ಮಾತ್ರ ಎಂದಿದ್ದಾರೆ.
|