ರಾಷ್ಟ್ರಪತಿ ಹುದ್ದೆಯಿಂದ ವಿರಮಿಸಿರುವ ಹಿರಿಯವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ, ಉಗ್ರಗಾಮಿ ಅಪ್ಝಲ್ ಗುರು ಮರಣದಂಡನೆಗೆ ದಯೆ ಹಾಗೂ ಬಿಹಾರದಲ್ಲಿ ವಿವಾದಿತ ರಾಷ್ಟ್ರಪತಿ ಆಳ್ವಿಕೆ ಕುರಿತು ಕುತೂಹಲಕಾರಿ ಹೇಳಿಕೆಗಳನ್ನು ಸಂದರ್ಶನವೊಂದರಲ್ಲಿ ನೀಡಿದ್ದಾರೆ.
ಅಧಿಕಾರದಲ್ಲಿರುವ ವರೆಗೆ ವಿವಾದಗಳಿಂದ ದೂರಾಗಿದ್ದ ಕಲಾಂ ಪದತ್ಯಾಗದ ಬಳಿಕ ಹೆಚ್ಚು ನಿರುಮ್ಮಳವಾದಂತೆ ಅನಿಸತೊಡಗಿದೆ.
ಮರಣದಂಡನೆಗೆ ನ್ಯಾಯಾಲಯದಿಂದ ತೀರ್ಪಾಗಿರುವ ಉಗ್ರಗಾಮಿ ಅಪ್ಝಲ್ ಗುರುವಿಗೆ ಜೀವದಾನ ನೀಡುವ ವಿಷಯದಲ್ಲಿ ರಾಷ್ಟ್ರಪತಿ ಭವನದಿಂದ ವಿಳಂಬವಾಗಿಲ್ಲ, ಆದರೆ ತನಗೆ ಈ ಕುರಿತು ಯಾವುದೇ ಕಾಗದ ಪತ್ರ ಲಭಿಸಿಲ್ಲ ಎಂದು ಹೇಳಿಕೆ ನೀಡಿ ರಾಜಕೀಯ ವಲಯ ಹುಬ್ಬೇರಿಸುವಂತೆ ಮಾಡಿದ್ದಾರೆ.
ಆಂಗ್ಲ ವಾರಪತ್ರಿಕೆ ನೀಡಿರುವ ಸಂದರ್ಶನದಲ್ಲಿ ಅಪ್ಝಲ್ ಮರಣದಂಡನೆ ಕುರಿತು ಪ್ರಸ್ತಾಪಿಸಿದ ಕಲಾಂ, ಸಂಬಂಧಿತ ಸಚಿವಾಲಯದಿಂದ ದಯಾಭಿಕ್ಷೆ ನೀಡಲು ವಿನಂತಿಸಿ ಯಾವುದೇ ಕಾಗದಪತ್ರಗಳು ಕೈ ಸೇರಿಲ್ಲ ಎಂದಿದ್ದಾರೆ.
ವಿವಾದಿತ ಆದೇಶವಾದ, ವಿದೇಶದಲ್ಲಿದ್ದಾಗ್ಯೂ ಬಿಹಾರದಲ್ಲಿ ತುರ್ತು ರಾಷ್ಟ್ರಪತಿ ಆಳ್ವಿಕೆಗೆ ಆದೇಶಿಸಿದ ಪ್ರಕರಣದಲ್ಲಿ ಈಗಲೂ ವಿಷಾದವಿಲ್ಲ ಎಂದು ದೃಢಪಡಿಸಿದ್ದಾರೆ.
ತಾನು ಆಗ ರಷ್ಯಾ ಪ್ರವಾಸದಲ್ಲಿದ್ದರೂ , ಪ್ರಧಾನಿ ಮನಮೋಹನ್ಸಿಂಗ್ ಜೊತೆ ವಿಸ್ತೃತ ಮಾತುಕತೆ ನಡೆಸಿದ್ದೆನು. ಅಲ್ಲದೆ ಆದೇಶ ನೀಡುವ ಮೊದಲು ಅದಕ್ಕೆ ಪೂರಕವಾಗುವ ಮಾಹಿತಿಗಳನ್ನು ಸರ್ಕಾರಿ ಇಲೆಕ್ಟ್ರಾನಿಕ್ ಸಂವಹನ ವಿಧಾನದಲ್ಲಿ ತರಿಸಿ ಕೂಲಂಕುಶ ಪರೀಕ್ಷೆಯ ಬಳಿಕ ಆದೇಶ ನೀಡಲಾಗಿದೆ ಎಂದು ಕಲಾಂ ವಿವರಿಸಿದ್ದಾರೆ.
ಅಪ್ಝಲ್ ಕುರಿತ ಕಲಾಂ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದ್ದು, ಕಲಾಂ ವಿವಾದಕ್ಕೆ ಸಿಲುಕುವರೇ ಕಾದು ನೋಡಬೇಕಿದೆ.
|