ಸಂತ್ರಸ್ತರ ಹಣ ನುಂಗಿರುವುದು ಅವಮಾನಕರ ಮಾಜಿಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಹತ್ಯೆಗೆ ಸಂಬಂಧಿಸಿ ಸಿಖ್ ವಿರೋಧಿ ಘರ್ಷಣೆಯಲ್ಲಿ ಸಂತ್ರಸ್ತರಿಗೆ ಸರ್ಕಾರ ನೀಡಿದ ಪರಿಹಾರವನ್ನು ದುರ್ವಿನಿಯೋಗ ಮಾಡಿದ ಪ್ರಕರಣದಲ್ಲಿ 6 ಮಂದಿಗೆ ನ್ಯಾಯಾಲಯ ಕಠಿಣ ಸಜೆ, ದಂಡಪಾವತಿಯಂತಹ ಶಿಕ್ಷೆ ವಿಧಿಸಿದೆ.
1984ರಲ್ಲಿ ಸಂಭವಿಸಿದ ಸಿಖ್‌ವಿರೋಧಿ ಘರ್ಷಣೆಯಲ್ಲಿ ನೊಂದವರಿಗೆ ಸರ್ಕಾರ ನೀಡಿದ ಪರಿಹಾರವನ್ನು ನಕಲಿ ಸಹಿ, ಕೃತಕ ದಾಖಲೆ ಪತ್ರ ಬಳಸಿ ದುರುಪಯೋಗ ಪಡಿಸಿದ ಅವ್ಯವಹಾರಕ್ಕಾಗಿ ಈ ಶಿಕ್ಷೆ ವಿಧಿಸಿದೆ.
ಭಾರತೀಯ ಸ್ಟೇಟ್ ಬ್ಯಾಂಕ್‌ನ ಜೆಎಂಒ ಸುರೀಂದರ್ ಸಿಂಗ್ ಜೈದಿ ಎಂಬಾತನಿಗೆ 5 ವರ್ಷಗಳವಧಿಯ ಕಠಿಣ ಕಾರಾಗೃಹವಾಸ ಶಿಕ್ಷೆ ಹಾಗೂ 55,000 ರೂ. ಮೊತ್ತದ ದಂಡ ವಿಧಿಸಲಾಗಿದೆ.
ಈತ ನಕಲಿ ಸಹಿ,ಕೃತಕ ಕಾಗದ ಪತ್ರ ಸೃಷ್ಟಿ, ಇತ್ಯಾದಿಗಳನ್ನು ಬಳಸಿ ಹಣ ಲಪಟಾಯಿಸಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಸ್ತುತ ಶಿಕ್ಷೆ ವಿಧಿಸಲಾಗಿದೆ.
ಸುರೀಂದರ್ ಸಹವರ್ತಿಗಳಾದ ರವೀಂದರ್ ಶರ್ಮಾ ಹಾಗೂ ಈತನ ಪುತ್ರರಾದ ಅಶ್ವಿನಿ ಶರ್ಮಾ, ಪ್ರವೀಣ್ ಶರ್ಮಾ, ಪೃಥ್ವಿರಾಜ್ ಶರ್ಮಾ ಮುಂತಾದವರಿಗೆ ತಲಾ ಐದು ವರ್ಷಗಳ ಕಠಿಣ ಸಜೆ, ಅನುಕ್ರಮವಾಗಿ 22,000 ರೂ., 9,000 ರೂ., 10,000 ರೂ., 8,000ರೂ. ಮೊತ್ತದ ಅನುಕ್ರಮ ದಂಡ ವಿಧಿಸಲಾಗಿದೆ.
ಬ್ಯಾಂಕ್ ಲೆಕ್ಕಿಗ ಹೇಮ್ಚಂದ್ ಶರ್ಮಾನಿಗೆ ಮೂರೂವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಹಾಗೂ 10,000 ರೂ.ಗಳ ದಂಡವನ್ನೂ ಶಿಕ್ಷೆಯಾಗಿ ವಿಧಿಸಲಾಗಿದೆ.
ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಅಂಗರಕ್ಷಕರಾದ ಸಿಖ್ ವ್ಯಕ್ತಿಗಳಿಂದ ಹತ್ಯೆಗೊಳಗಾದ ಕಾರಣ ಸಿಖ್ ವಿರೋಧಿ ಹಿಂಸಾಚಾರ ತಾಂಡವಾಡಿತ್ತು. ದೇಶಾದ್ಯಂತ ಹಿಂಸಾಚಾರದಲ್ಲಿ ಸಿಖ್‌ರೂ ಸೇರಿದಂತೆ ಸಾವಿರಾರು ಮಂದಿ ಅಮಾಯಕರು ಸಾವನ್ನಪ್ಪಿದ್ದರು.
ಪ್ರಸ್ತುತ ಪ್ರಕರಣದಲ್ಲಿ ಅತಂತ್ರರಾದ ಸಂತ್ರಸ್ತರಾದವರಿಗೆ ಸರ್ಕಾರ ತಲಾ 20,000 ರೂ. ಪರಿಹಾರ ನೀಡಿತ್ತು. ಆದರೆ ಸಂತ್ರಸ್ತರ ಕುಟುಂಬ, ವಿಧವೆಯರಿಗೆ ಅನುಕಂಪ ತೋರುವ ಬದಲು ಆರೋಪಿಗಳು ಹಣ ದುರುಪಯೋಗದ ಮೂಲಕ ಅವಮಾನ ಪಡಿಸಿದ್ದಾರೆ ಎಂದು ಜಡ್ಜರು ತಮ್ಮ ತೀರ್ಪಿನಲ್ಲಿ ಷರಾ ಬರೆದಿದ್ದಾರೆ.
|