ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿಯವರನ್ನು ಹತ್ಯೆಗೈಯ್ಯುವ ಸಂಚಿನೊಂದಿಗೆ ಕೊಯಮತ್ತೂರಿನ ವಿವಿಧೆಡೆ 1998ರಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿದ ಅಲ್ ಉಮ್ಮಾ ಉಗ್ರರಿಗೆ ಆಗಸ್ಟ್ 6ರಂದು ಶಿಕ್ಷೆಯ ತೀರ್ಪಾಗುವ ನಿರೀಕ್ಷೆ ಇದೆ.
ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಪಿಡಿಪಿ ಮುಖಂಡ ಅಬ್ದುಲ್ ನಾಸರ್ ಮದನಿಯನ್ನು ನ್ಯಾಯಾಲಯ ನಿನ್ನೆ ನಿರ್ದೋಷಿ ಎಂದು ಬಿಡುಗಡೆ ಮಾಡಿದೆ. ಆದರೆ ಇತರ 72 ಮಂದಿಯನ್ನು ಆರೋಪಿತರೆಂದು ವಿಚಾರಣೆ ಆರಂಭಿಸಿದೆ.
ಕುಖ್ಯಾತ ಮುಸ್ಲಿಂ ಭಯೋತ್ಪಾದನಾ ಸಂಘಟನೆ ಅಲ್ ಉಮ್ಮಾ ಸ್ಥಾಪಕನೆನ್ನಲಾದ ಬಾಷಾ ಸೇರಿದಂತೆ ಇತರ 71 ಮಂದಿಯ ವಿರುದ್ಧವಿರುವ ಆರೋಪ ಪಟ್ಟಿಯ ವಿಚಾರಣೆ ಪ್ರಗತಿಯಲ್ಲಿದೆ. ಇವರು ತಪ್ಪಿತಸ್ಥರೆಂದು ನ್ಯಾಯಾಲಯ ಗುರುತಿಸಿದೆ.
ಪ್ರಸ್ತುತ 12 ಸ್ಫೋಟಗಳನ್ನು ನಡೆಸುವ ಹಿಂದಿನ ದುರುದ್ದೇಶವೆಂದರೆ ಎರಡು ಕೋಮುಗಳ ನಡುವೆ ತ್ವೇಷಮಯ ವಾತಾವರಣ ನಿರ್ಮಿಸುವುದು ಎಂಬುದಾಗಿ ಮಾಹಿತಿ ಲಭಿಸಿತ್ತು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 120 ಬಿ ಯನ್ವಯ ಕೂಟ ಸೇರಿ ಅಪರಾಧ ಕೃತ್ಯ ಸಂಚು ನಡೆಸಿರುವ ಆರೋಪ ದಾಖಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.
1998ರಲ್ಲಿ ಕೊಯಮತ್ತೂರು ನಗರದ ವಿವಿಧೆಡೆ ಹಾಗೂ ಬಿಜೆಪಿ ಲೋಕಸಭಾ ಪ್ರಚಾರಕ ಸಮಾವೇಶದ ಜಾಗದಲ್ಲಿ ಸ್ಫೋಟ ಸಂಭವಿಸಿತ್ತು. ಇದು ಪಕ್ಷದ ರಾಷ್ಟ್ರೀಯ ನಾಯಕ ಎಲ್ ಕೆ ಅಡ್ವಾಣಿಯ ಹತ್ಯೆಯನ್ನು ಗುರಿಯಾಗಿರಿಸಿ ನಡೆಸಿದ್ದೆಂಬುದಾಗಿ ಸಂಶಯಿಸಲಾಗಿತ್ತು.
|