ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಎರಡು ಪ್ರಮುಖ ಹೆಜ್ಜೆಗುರುತುಗಳಿವೆ. ಮೊದಲನೆಯದು 1857ರ ಪ್ರಥಮ ಸಂಗ್ರಾಮ. ಎರಡನೆಯದು 1942ರ ಕ್ವಿಟ್ ಇಂ ಇಂಡಿಯಾ ಆಂದೋಲನ; ಅದರ ಸ್ಮರಣೆ ಇಂದು.
ನಮ್ಮ ಸ್ವಾತಂತ್ರ್ಯ ವೀರರು 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' (ಕ್ವಿಟ್ ಇಂಡಿಯಾ) ಎಂಬುದಾಗಿ ಅಂತಿಮ ತಾಕೀತು ನೀಡಿದ ದಿನ ಇದು. 1942ರ ಆಗಸ್ಟ್ 9ರಂದು ಮಹಾತ್ಮಾ ಗಾಂಧಿ ನೇತೃತ್ವದ ಚಳುವಳಿಕಾರರು ಈ ಘೋಷಣೆ ನಡೆಸಿದರು.
ಅಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ತ್ರಿವರ್ಣ ಪತಾಕೆಯಡಿ ಎಲ್ಲಾ ಚಳುವಳಿಕಾರರೂ ಒಗ್ಗೂಡಿ, ದೇಶದಿಂದ ಪರಕೀಯರನ್ನು ಮೂಲೋಚ್ಛಾಟಿಸಲು ಸಿದ್ಧರಾದ ಮಹತ್ವದ ದಿನವದು.
ಜನಸಾಮಾನ್ಯರನ್ನು ಒಗ್ಗೂಡಿಸಿ ಅಂತಿಮ ಮಹಾಸಮರಕ್ಕೆ ಸಿದ್ಧರಾದ ಬೃಹತ್ ಪ್ರತಿಭಟನೆಗಳ ಮೂಲಮಂತ್ರ ಈ ಕ್ವಿಟ್ ಇಂಡಿಯಾ. ಆ ಬಳಿಕ ಕೆಲವೇ ವರ್ಷಗಳಲ್ಲಿ , ಅಂದರೆ 1947ರಲ್ಲಿ ಭಾರತ ಸ್ವತಂತ್ರವಾದುದನ್ನು ಸ್ಮರಿಸಬಹುದಾಗಿದೆ.
ಕ್ವಿಟ್ ಇಂಡಿಯಾ ಆಂದೋಲನದ ಪ್ರಯುಕ್ತ ಅಂದು ಆಗಸ್ಟ್ 9ರಂದು ಮುಂಬೈಯ ಆಗಸ್ಟ್‌ಕ್ರಾಂತಿ ಮೈದಾನದಲ್ಲಿ ಜರುಗಿದ ಸಾರ್ವಜನಿಕ ಬೃಹತ್ ಸಮಾವೇಶದಲ್ಲಿ ಕ್ವಿಟ್ ಇಂಡಿಯಾ ಘೋಷಣೆ ಒಗ್ಗಟ್ಟಿನ ಪ್ರೇರಕ-ತಾರಕ ಮಂತ್ರವಾಗಿ ಹೊರಹೊಮ್ಮಿತು.
ಈ ಘೋಷಣೆಯ ಮುಂದುವರಿದ ಭಾಗವೆಂಬಂತೆ ಭಾರತೀಯರಿಗೆ ಸ್ವಾತಂತ್ರ್ಯ ಚಳುವಳಿಕಾರರು ನೀಡಿದ 'ಮಾಡು ಇಲ್ಲವೇ ಮಡಿ' ಕರೆ ಕೂಡ ನಿರ್ಣಾಯಕವಾಗಿತ್ತು. ಇದರ ಮರುದಿನವೇ ಗಾಂಧೀಜಿ ಮತ್ತಿತರರನ್ನು ಬ್ರಿಟಿಷರ್ ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಈ ಎಲ್ಲಾ ಸಾಧನೆಗಳ ಹೆಮ್ಮೆಯ ಮೆಲುಕು ಹಾಕುವ ಕಾರ್ಯ ಇಂದು ಜರುಗಲಿಗದೆ. ಇಂದು ಕ್ವಿಟ್ ಇಂಡಿಯಾ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.
(ವೀಬಿ)
|