ಈಚಿನ ವಾರಗಳಲ್ಲಿ ಅತೀವೃಷ್ಟಿ ಪೀಡಿತವಾಗಿರುವ ಅಸ್ಸಾಂ ಹಾಗೂ ಬಿಹಾರ ರಾಜ್ಯಗಳ ನೆರೆ ಹಾವಳಿ ಸಂತ್ರಸ್ತರಿಗೆ 20 ಲಕ್ಷ ರೂ. (ಸುಮಾರು 50 ಸಾವಿರ ಡಾಲರ್) ಮಾನವೀಯ ನೆರವು ನೀಡುವುದಾಗಿ ಭಾರತದಲ್ಲಿನ ಅಮೆರಿಕಾ ರಾಯಭಾರಿ ಡೇವಿಡ್ ಸಿ. ಮಲ್ಫೋರ್ಡ್ ಇಂದು ಪ್ರಕಟಿಸಿದ್ದಾರೆ.
ಈ ಹಣವನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಸಲ್ಲಿಸಲಾಗುವುದು.
ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ರಾಯಭಾರಿ ಮಲ್ಫೋರ್ಡ್ ಅವರು, ಈ ವರ್ಷದ ಮಳೆಗಾಲ ಆರಂಭವಾದಾಗಿನಿಂದ ಉಂಟಾಗಿರುವ ಅತಿವೃಷ್ಟಿ ಹಾಗೂ ಭಾರೀ ನೆರೆ ಹಾವಳಿಯಿಂದ ಲಕ್ಷಾಂತರ ಜನ ಸಂತ್ರಸ್ತರಾಗಿರುವ ಕುರಿತು ಅಮೆರಿಕಾದ ಜನತೆ ಹಾಗೂ ಸರಕಾರದ ಪರವಾಗಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಈ ನೆರವನ್ನು ಅಮೆರಿಕಾ ರಾಯಭಾರಿಗಳ ಮಾನವೀಯ ಪರಿಹಾರ ನಿಧಿಯ ಮುಖಾಂತರ ಕೊಡಮಾಡಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ನೆರವು ನೀಡಲು ಅಮೆರಿಕಾ ಸಿದ್ಧವಿದೆ ಎಂಬ ಇಂಗಿತವನ್ನೂ ರಾಯಭಾರಿ ಮಲ್ಫೋರ್ಡ್ ವ್ಯಕ್ತಪಡಿಸಿದ್ದಾರೆ.
|